ರಾಯಚೂರು: ಉಡುಪಿಯ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಂದೂ ವಿದ್ಯಾಥಿ೯ನಿಯರ ಶೌಚಾಲಯದ ಖಾಸಗಿ ವಿಡಿಯೊ ಮಾಡಿದ ಪ್ರಕರಣ. ಇದು ಬಿಜೆಪಿ ಪ್ರಾಯೋಜಿತ ವಿಷಯ ಪ್ರಚಾರ ಎಂದು ಈಗಾಗಲೇ ಸಾಬೀತಾಗಿದೆ ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಆರೋಪಿಸಿದ್ದಾರೆ.
ಉಡುಪಿಯ ಶೌಚಾಲಯ ವಿಡಿಯೊ ಪ್ರಕರಣದ ಬಗ್ಗೆ ವಿಧ್ಯಾರ್ಥಿಗಳಾಗಲಿ ಅಥವಾ ಕಾಲೇಜ್ ಆಡಳಿತ ಮಂಡಳಿಯಾಗಲಿ ದೂರು ನೀಡಿಲ್ಲ ಎಂದು ಉಡುಪಿ ಪೋಲಿಸ್ ಉನ್ನತಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಆದರೂ ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ಪ್ರಚೋದನಕಾರಿ ಮಾತುಗಳನ್ನಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮ್ ವಿಧ್ಯಾರ್ಥಿಗಳ ವಿರುದ್ದ ಹಿಂದೂ ವಿಧ್ಯಾರ್ಥಿಗಳನ್ನು ಎತ್ತಿಕಟ್ಟುತ್ತಿದ್ದಾರೆ. ಅವರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸಂಘ ಪರಿವಾರ, ಬಿಜೆಪಿಯ ವಿವಾದ, ದ್ವೇಷ ಹಾಗೂ ಮತಿಯ ಸಂಘರ್ಷದ ರಾಜಕಾರಣಕ್ಕೆ ಕರ್ನಾಟಕದ ಜನ ತಕ್ಕ ಪಾಠ ಕಲಿಸಿದ್ದಾರೆ. ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಿಸಿ ಕೊಳ್ಳಲಾಗದ ಸ್ಥಿತಿಯಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಇದು ಈ ಹಿಂದೆ 'ಡಬಲ ಎಂಜಿನ್ ಸರ್ಕಾರ'ದ ಜನ ವಿರೋಧಿ ಆಡಳಿತಕ್ಕೆ ಸಿಕ್ಕ ಸೂಕ್ತ ಬಹುಮಾನ ಕೊಟ್ಟಿದ್ದಾರೆ ಎಂದು ಕಟುಕಿದ್ದಾರೆ.
ವಿವಾದ, ಹಿಂಸೆ ಹಾಗೂ ಅಶಾಂತಿಯ ಮೂಲಕ ರಾಜಕೀಯವಾಗಿ ಚೇತರಿಸಿಕೊಳ್ಳುವ ಅಜೆಂಡಾ ಹೊಂದಿರುವ ರಾಜ್ಯ ಬಿಜೆಪಿ. ಇದರ ಪೂರ್ವ ಯೋಜಿತ ಪ್ರಚಾರವೇ ಉಡುಪಿಯ ನೇತ್ರ ಜ್ಯೋತಿ ಕಾಲೇಜ್ ಶೌಚಾಲಯದ ವಿಡಿಯೊ ವದಂತಿ ಎಂದು ಟೀಕಿಸಿದ್ದಾರೆ.
ಕಾಲೇಜನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೂರು ಜನ ಮುಸ್ಲಿಮ್ ವಿಧ್ಯಾರ್ಥಿಗಳು ಮೊಬೈಲ್ ತೆಗೆದುಕೊಂಡು ಹೋದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ ವಿನಾಃ ವಿಡಿಯೊ ಕಾರಣಕ್ಕಲ್ಲ. ಅವರ ಮೊಬೈಲ್ ನಲ್ಲಿ ಅಂಥ ಯಾವ ವಿಡಿಯೊ ಇಲ್ಲ ಎಂದು ಪೊಲೀಸರು ಈಗಾಗಲೇ ಸ್ಪಷ್ಟಪಡಿಸಿದರೂ ವಿದ್ಯಾರ್ಥಿಗಳನ್ನು ಮತೀಯ ಗುಂಪು ಘರ್ಷಣೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆ ಖಂಡಿಸದ ಇವರು ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಸಾವಿರಾರು ಸೈಬರ್ ಅಪರಾಧಕ್ಕೆ ಕಾರಣವಾಗಿರುವ ಇದನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.