ಸಮಸ್ಯೆ ಸೃಷ್ಟಿಸಿದ ಒಳಚರಂಡಿ ನಿರ್ಮಾಣ ಮಾರ್ಗ!

7
ಕೆಸರುಗದ್ದೆಯಾಗಿ ಮಾರ್ಪಟ್ಟ ರಾಮಲಿಂಗೇಶ್ವರ ಲೇಔಟ್‌ ಮಾರ್ಗಗಳು

ಸಮಸ್ಯೆ ಸೃಷ್ಟಿಸಿದ ಒಳಚರಂಡಿ ನಿರ್ಮಾಣ ಮಾರ್ಗ!

Published:
Updated:
Deccan Herald

ರಾಯಚೂರು: ನಗರದ ರಾಮಲಿಂಗೇಶ್ವರ ಲೇಔಟ್‌ನಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದು ಮಣ್ಣುಮುಚ್ಚಿದ್ದ ಮಾರ್ಗಗಳೆಲ್ಲವೂ ಈಚೆಗೆ ಸುರಿದ ಸಣ್ಣ ಮಳೆಗೆ ತೆರೆದ ಚರಂಡಿಗಳಾಗಿ ಮಾರ್ಪಟ್ಟಿವೆ!

ಕಾಮಗಾರಿ ಮುಗಿದು ಎಂಟು ತಿಂಗಳಾಗಿದ್ದರೂ ಬಡಾವಣೆ ರಸ್ತೆಗಳನ್ನು ಮೊದಲಿದ್ದಂತೆ ಪುನರ್‌ ನಿರ್ಮಿಸುವ ಕೆಲಸ ನಡೆಯುತ್ತಿಲ್ಲ. ತುಂತುರು ಮಳೆಯಿಂದ ಸಡಿಲ ಮಣ್ಣು ಕೆಸರುಗದ್ದೆಯಾಗುತ್ತಿದೆ. ಅದರ ಮೇಲೆ ವಾಹನಗಳು ಸಂಚರಿಸುವುದರಿಂದ ತಗ್ಗುಗಗಳುಂಟಾಗಿ ಮಾರ್ಗವೂ ಮತ್ತಷ್ಟು ಹದಗೆಟ್ಟಿದೆ.

ಮನೆ ಬಾಗಿಲು ಎದುರು ಮಳೆ ನೀರು ನಿಂತು ಕೆಸರುಗದ್ದೆ ಆಗುತ್ತಿರುವುದರಿಂದ ಕೆಲವು ಬಾಡಿಗೆ ಮನೆಗಳಿಗೆ ಬಾಡಿಗೆದಾರರು ಬರುವುದಕ್ಕೆ ನಿರಾಕರಿಸುತ್ತಿದ್ದಾರೆ. ಈಗಾಗಲೇ ಬಾಡಿಗೆ ಉಳಿದಿದ್ದ ನೆಲಮಹಡಿ ಮನೆಗಳ ಜನರು ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋಗುತ್ತಿರುವ ಪ್ರಸಂಗ ತಲೆದೋರಿದೆ.

ರಾಮಲಿಂಗೇಶ್ವರ ಲೇಔಟ್‌ನ ಯಾವುದೇ ಬೀದಿ ಸಿಸಿ ರಸ್ತೆ ಭಾಗ್ಯ ಕಂಡಿಲ್ಲ. ಕಳೆದ ಅವಧಿಯಲ್ಲಿ ನಗರಸಭೆಗೆ ಆಯ್ಕೆಯಾಗಿದ್ದ ವಾರ್ಡ್‌ ಸದಸ್ಯರು ರಸ್ತೆ ನಿರ್ಮಾಣ ಮತ್ತು ರಸ್ತೆ ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ಜನರಲ್ಲಿ ಅಸಮಾಧಾನ ಮನೆಮಾಡಿದೆ.

ಲೇಔಟ್‌ ಮಾರ್ಗಗಳೆಲ್ಲ ತಗ್ಗುದಿನ್ನೆಗಳಿಂದ ಕೂಡಿದ ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿರುವುರಿಂದ ಪೌರಕಾರ್ಮಿಕರು ಕೂಡಾ ತೊಂದರೆ ಎದುರಿಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹಿಸಲು ಮನೆಮನೆಗೆ ತಳ್ಳುಗಾಡಿ ತೆಗೆದುಕೊಂಡು ಬರುವುದು ದುಸ್ತರವಾಗಿದೆ.

ಮಕ್ಕಳು, ವಯೋವೃದ್ಧರು ಮನೆಯಿಂದ ಹೊರಬರುವುದಕ್ಕೆ ಆಗದ ಪರಿಸ್ಥಿತಿ ಇದೆ. ಚಪ್ಪಲಿ ಮೆಟ್ಟಿಕೊಂಡು ಕೆಸರಿನಲ್ಲಿ ನಡೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲ. ಬೈಕ್, ಆಟೊ ಅಥವಾ ಕಾರುಗಳಲ್ಲಿ ಮನೆಬಾಗಿಲಿನ ಬಳಿಯೇ ಇಳಿದುಕೊಳ್ಳಬೇಕು. ಶಾಲೆಗಳಿಗೆ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳು ತುಂಬಾ ತಾಪತ್ರಯ ಎದುರಿಸುತ್ತಿದ್ದಾರೆ. ಸಣ್ಣ ಮಳೆಯಾದರೂ ಕೆಸರಿನ ಹೊಂಡಗಳು ನಿರ್ಮಾಣವಾಗುತ್ತವೆ.

ಇವರೆಗೂ ರಾಯಚೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಆದರೆ ಸಣ್ಣ ಪ್ರಮಾಣದ ಮಳೆಯಿಂದಾಗಿಯೆ ಪರಿಸ್ಥಿತಿ ಹದಗೆಟ್ಟಿದೆ. ದೊಡ್ಡ ಪ್ರಮಾಣದ ಮಳೆಬಿದ್ದರೆ ಸಂಕಷ್ಟ ಇನ್ನೂ ಹೆಚ್ಚಾಗಲಿದೆ. ಐಬಿ ಕಾಲೋನಿಯಿಂದ ದಾತಾರ್‌ ಕಾಲೋನಿಗೆ ಹೋಗುವ ಮಾರ್ಗವೂ ತುಂಬಾ ಹದಗೆಟ್ಟಿದೆ. ಹೊಸಮನಿ ಆಸ್ಪತ್ರೆ ಪಕ್ಕದ ಆಟೊ ನಿಲ್ದಾಣದ ಅಂಗಳವು ಭತ್ತದ ಗದ್ದೆಯಾಗುತ್ತದೆ. ಕೆಸರಿನಲ್ಲಿ ಕಾಲು ಹುದುಗಿಸಿಕೊಂಡು ನಡೆದಾಡುವುದು ಅನಿವಾರ್ಯ ಎನ್ನುವ ಸ್ಥಿತಿ ಇದೆ.

ಒಳಚರಂಡಿ ನಿರ್ಮಾಣಕ್ಕೆ ಅಲ್ಲಲ್ಲಿ ಅಗೆದು ಹಾಕಿದ್ದ ತಗ್ಗುಗಳಿಗೆ ಬರೀ ಮಣ್ಣು ತುಂಬಿಸಿ ಬಿಡಲಾಗಿತ್ತು. ಇದೀಗ ಮಳೆಯಿಂದ ಭೂಮಿ ಕುಸಿದು ತಗ್ಗುಗಳು ನಿರ್ಮಾಣವಾಗಿ ಅನೇಕ ತಿಂಗಳುಗಳಾಗಿವೆ. ತಗ್ಗುಗಳನ್ನು ಸಮರ್ಪಕವಾಗಿ ಮುಚ್ಚಿ ರಸ್ತೆ ನಿರ್ಮಾಣ ಮಾಡುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿಲ್ಲ. ಈ ಬಗ್ಗೆ ನಿಗಾ ವಹಿಸಿ ಕೆಲಸ ಮಾಡಿಸಬೇಕಿದ್ದ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಾ ಮೌನ ವಹಿಸಿದ್ದಾರೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ.
|**
ಒಳಚರಂಡಿಗಾಗಿ ರಸ್ತೆ ಅಗೆದಿರುವುದನ್ನು ವಾಪಸ್ ಮುಚ್ಚಿ ಎಂಟು ತಿಂಗಳಾಗಿದ್ದು, ಅದು ಸಾಕಷ್ಟು ಕುಸಿದು ಹೋಗಿದೆ. ಈಗ ಮಳೆ ನೀರು ನಿಂತು ನಡೆದು ಹೋಗುವುದಕ್ಕೂ ಸಾಧ್ಯವಾಗದಂತಾಗಿದೆ.
ಅಶೋಕ, ರಾಮಲಿಂಗೇಶ್ವರ ಲೇಔಟ್ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !