ಅಂಗನವಾಡಿ ಖಾಸಗೀಕರಣ ಕೈಬಿಡಲು ಆಗ್ರಹ

7
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಮಟ್ಟದ 6ನೇ ಸಮ್ಮೇಳನ

ಅಂಗನವಾಡಿ ಖಾಸಗೀಕರಣ ಕೈಬಿಡಲು ಆಗ್ರಹ

Published:
Updated:
Prajavani

ರಾಯಚೂರು: ಮಕ್ಕಳ ಅಪೌಷ್ಟಿಕ ಸಮಸ್ಯೆ ಹೋಗಲಾಡಿಸಲು ಆರಂಭಿಸಿದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವುದನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ನಾಗರತ್ನ ಆಗ್ರಹಿಸಿದರು.

ನಗರದ ಬಾಲಭವನದ ಎದುರು ಮಂಗಳವಾರ ಆಯೋಜಿಸಿದ್ದ ಸಂಘದ ಜಿಲ್ಲಾಮಟ್ಟದ 6ನೇ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಯೋಜನೆಯು ಇನ್ನೂ ವ್ಯಾಪಕವಾಗಿ ಮಕ್ಕಳಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯು ಸರ್ಕಾರಕ್ಕೆ ಒತ್ತಾಯಿಸುತ್ತಾಎ ಬಂದಿದೆ. ಆದರೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸುವ ಮುಖಾಂತರ ಅಂಗನವಾಡಿ ಕೇಂದ್ರಗಳ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಅಂಗನವಾಡಿ ಕೇಂದ್ರಗಳ ಖಾಸಗೀಕರಣದಿಂದ ಮಕ್ಕಳಿಗೆ ಇದುವರೆಗೆ ಸಿಗುತ್ತಿದ್ದ ಪೌಷ್ಟಿಕಾಂಶ ಆರೋಗ್ಯದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರದ ಈ ಕ್ರಮವು ಸರಿಯಲ್ಲ. ಈ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಲಕ್ಷಾಂತರ ಅಂಗನವಾಡಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಖಾಸಗೀಕರಣ ಕೈಬಿಡಬೇಕು. ಖಾಸಗೀಕರಣದ ವಿರುದ್ಧ ಅಂಗನವಾಡಿ ನೌಕರರು ಹೋರಾಟಕ್ಕೆ ಮುಂದಾಗಬೇಕು. ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ ಮಾತನಾಡಿ, 1991 ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಗಳನ್ನು ಇಂದಿನ ಕೇಂದ್ರ ಸರ್ಕಾರ ಬಹಳಷ್ಟು ವೇಗವಾಗಿ ಜಾರಿ ಮಾಡುತ್ತಿದೆ. ಇದರ ಪರಿಣಾಮವಾಗಿ ದೇಶಕ್ಕೆ ಅನ್ನ ನೀಡುವ ರೈತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ನೌಕರರು, ಕೃಷಿ ಕೂಲಿ ಕಾರ್ಮಿಕರು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಜಾರಿಗೆ ತಂದ ನೋಟ್ ಅಮಾನ್ಯೀಕರಣದಿಂದಾಗಿ ಸಣ್ಣ ಮತ್ತು ಲಘು ಉದ್ಯಮಗಳು ಮುಚ್ಚಿಕೊಂಡವು. ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಸ್ಕೀಮ್ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಇಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸ್ಕೀಮ್ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಬೆಲೆ ಏರಿಕೆಗೆ ತಕ್ಕಂದೆ ಅವರ ವೇತನದಲ್ಲಿ ಹೆಚ್ಚಳವಾಗುತ್ತಿಲ್ಲ. ಅವರಿಗೆ ಕನಿಷ್ಠ ವೇತನ ಕಾಯ್ದೆ ಅಡಿ ವೇತನ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಡಿ.ಎಸ್.ಶರಣಬಸವ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪದ್ಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವರಲಕ್ಷ್ಮೀ ‍ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ಖಜಾಂಚಿ ರಂಗಮ್ಮ ಅನ್ವರ ಸ್ವಾಗತಿಸಿ, ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !