ಬುಧವಾರ, ಸೆಪ್ಟೆಂಬರ್ 29, 2021
19 °C

ನರೇಗಾ ಬಾಕಿ ಕೂಲಿ ನೀಡಲು ಒತ್ತಾಯ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರು ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಸೋಮವಾರ ಧರಣಿ ನಡೆಸಿದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರ ಕೂಲಿಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ತಾಲ್ಲೂಕಿನ ವಡ್ಲೂರು, ಕಲ್ಮಲಾ, ಜೇಗರಕಲ್‌ ಸೇರಿದಂತೆ ವಿವಿಧ ಪಂಚಾಯಿತಿಗಳಲ್ಲಿ ಬಾಕಿಯಿರುವ ಕೂಲಿ ಪಾವತಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಕೃಷಿ ಹೊಂಡ ಕಾಮಗಾರಿಗಳ ಕೆಲಸವನ್ನು ಕೂಲಿಕಾರರಿಗೆ ನೀಡದೇ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ, ಕೂಲಿಕಾರರ ಹೆಸರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೂಲಿಕಾರರಿಗೆ ಬಾಕಿ ಕೂಲಿ ಪಾವತಿಗೆ ಕ್ರಮ ಜರುಗಿಸಬೇಕು. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ತ್ವರಿತವಾಗಿ ಕೆಲಸ ಒದಗಿಸಬೇಕು. ಜಾಬ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದವರಿಗೆ ಜಾಬ್‌ ಕಾರ್ಡ್‌ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರಾಘವೇಂದ್ರ, ಲಕ್ಷ್ಮಣ, ನರಸಿಂಹರೆಡ್ಡಿ, ಪ್ರಕಾಶ, ಶಿವಕುಮಾರ, ನಾಗಪ್ಪ, ಗೋವಿಂದಮ್ಮ, ಲಿಂಗಮ್ಮ, ನರಸಮ್ಮ, ಗೋವರ್ಧನರೆಡ್ಡಿ, ರಮೇಶ ಇದ್ದರು.

ವಿವಿಧ ಬೇಡಿಕೆ ಈಡೇರಿಸಲು ಸಿಪಿಐ (ಎಂಎಲ್‌) ರೆಡ್‌ಸ್ಟಾರ್ ಒತ್ತಾಯ

ಕೇರಳ ರಾಜ್ಯದಲ್ಲಿ ಭೂ ಸಂಘರ್ಷದ ಮುಂದಾಳುಗಳಾದ ಕುಂಜಿಕಣಾರನ್, ರಾಜೇಶ ಹಾಗೂ ಮನೋಹರನ್ ಅವರನ್ನು ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಪಿಐ (ಎಂಎಲ್‌) ರೆಡ್‌ಸ್ಟಾರ್‌ ಜಿಲ್ಲಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಭೂ ಹೋರಾಟಗಾರರ ಮೇಲೆ ಹಾಕಿದ ಎಲ್ಲ ಮೊಕದ್ದಮೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು. ಟಾಟಾ– ಹಾರಿಸನ್‌ ಕಂಪನಿಗೆ ಸೇರಿದ 5.25 ಲಕ್ಷ ಎಕರೆ ಭೂಮಿಯನ್ನು ಆದಿವಾಸಿಗಳಿಗೆ, ದಲಿತರಿಗೆ ಹಾಗೂ ಭೂ ರಹಿತರಿಗೆ ವಿತರಿಸಬೇಕು. ಕಾರ್ಪೋರೇಟ್‌ ಕಂಪೆನಿಗಳ ಹಿತ ಕಾಯುವುದು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಕೇರಳ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

1947ಕ್ಕಿಂತ ಮುಂಚೆ ಟಾಟಾ ಹಾರಿಸನ್‌ ಕಂಪೆನಿ ಹೆಸರಿನಲ್ಲಿರುವ ಈ ಭೂಮಿಯನ್ನು ಸರ್ಕಾರ ಇದುವರೆಗೆ ವಶಕ್ಕೆ ಪಡೆದುಕೊಂಡಿಲ್ಲ. ಭೂರಹಿತರ ಶತಮಾನಗಳ ಬೇಡಿಕೆಯನ್ನು ಈಡೇರಿಸಲು ಸಿಪಿಐ (ಎಂ) ನೇತೃತ್ವದ ಎಡರಂಗ ಸರ್ಕಾರ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಭೂಮಿಗಾಗಿ ಆರಂಭಿಸಿರುವ ಹೋರಾಟವನ್ನು ಸರ್ಕಾರ ಕುತಂತ್ರದಿಂದ ದಮನ ಮಾಡುತ್ತಿದೆ ಎಂದು ಆರೋಪಿಸಿದರು.

ಭೂಮಿ ಕಬ್ಜ ಹೊಂದಿದ್ದ ಆದಿವಾಸಿಗಳನ್ನು ಪೊಲೀಸ್‌ ಬಲ ಪ್ರಯೋಗಿಸಿ ಹೊರಹಾಕಲಾಗಿದೆ. ಹೋರಾಟಗಾರರನ್ನು ಜೈಲಿಗೆ ಹಾಕಲಾಗಿದೆ. ಹೋರಾಟಗಾರರು ಜೈಲಿನಲ್ಲಿ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ 17ನೇ ದಿನದಂದು ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಸರ್ಕಾರದ ಬಣ್ಣ ಬಯಲಾಗಿದ್ದು, ಹೋರಾಟಕ್ಕೆ ಬೆಂಬಲ ನೀಡಲಾಗುತ್ತದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಟಿಯುಸಿಐ ಜಿಲ್ಲಾ ಅಧ್ಯಕ್ಷ ಜಿ.ಅಮರೇಶ, ಜಿ.ಶೇಖರಯ್ಯ, ಯಲ್ಲಪ್ಪ ಉಟಕನೂರು, ಮಲ್ಲಯ್ಯ ಕಟ್ಟಿಮನಿ, ಹುಚ್ಚರೆಡ್ಡಿ, ವಿರುಪಾಕ್ಷಿಗೌಡ, ಮುದಕಪ್ಪ, ಪರಶುರಾಮ, ಪ್ರಕಾಶ, ಶೇಖ ಹುಸೇನ ಬಾಷಾ, ಸಂತೋಷ, ಗಿರಿಲಿಂಗಸ್ವಾಮಿ, ಸಿದ್ಧಲಿಂಗಪ್ಪ ಇದ್ದರು.

ಶಿಕ್ಷಣ ಸಂಸ್ಥೆಯ ಗುತ್ತಿಗೆ ರದ್ದಿಗೆ ಮನವಿ

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸುಗೂರು ಶ್ರೀ ಸೂಗೂರೇಶ್ವರ ದೇವಸ್ಥಾನದ ಶಿಕ್ಷಣ ಸಂಸ್ಥೆಯನ್ನು ಶ್ರೀಕೃಷ್ಣ ಅಕಾಡೆಮಿಗೆ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಶಿವಕುಮಾರ ಯಾದವ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ದೇವಸ್ಥಾನದ ಸಮಿತಿ ಶಿಕ್ಷಣ ಸಂಸ್ಥೆಗೆ ಯಾವುದೇ ಸೌಲಭ್ಯವನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿದೆ. ಸಾರ್ವಜನಿಕ ಪ್ರಕಟಣೆ ಹೊರಡಿಸದೇ ಏಕಾಏಕಿ ಆಡಳಿತ ಮಂಡಳಿ ಪದಾಧಿಕಾರಿಗಳು ಸಭೆ ಸೇರಿ ಗುತ್ತಿಗೆ ನೀಡಲು ಠರಾವು ಪಾಸು ಮಾಡಿದ್ದಾರೆ ಎಂದು ಸಂಘಟನೆ ಪದಾಧಿಕಾರಿಗಳು ಆರೋಪಿಸಿದರು.

ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗ ಗುತ್ತಿಗೆ ನೀಡಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದ್ದರಿಂದ ಗುಣಮಟ್ಟದ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು