ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್‌ ನೇತೃತ್ವದಲ್ಲಿ ಪ್ರತಿಭಟನೆ
Last Updated 9 ಆಗಸ್ಟ್ 2019, 12:35 IST
ಅಕ್ಷರ ಗಾತ್ರ

ರಾಯಚೂರು: ಜೆಸ್ಕಾಂ ರಾಯಚೂರು ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್‌ ನೇತೃತ್ವದಲ್ಲಿ ಕಾರ್ಮಿಕರು ನಗರದ ಟಿಪ್ಪುಸುಲ್ತಾನ ಉದ್ಯಾನದಿಂದ ಜೆಸ್ಕಾಂ ಕಚೇರಿವರೆಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಾಕಿಯಿರುವ ವೇತನವನ್ನು ತ್ವರಿತಗತಿಯಲ್ಲಿ ಪಾವತಿ ಮಾಡಬೇಕು. ಕನಿಷ್ಠ ವೇತನ ಕಾಯ್ದೆ ಪ್ರಕಾರ ₹21 ಸಾವಿರ ವೇತನ ನೀಡಬೇಕು. ಹಿಂದಿನ ವೇತನ ವ್ಯತ್ಯಾಸದ ಬಾಕಿ ಪಾವತಿಸಬೇಕು. ಸುಪ್ರೀಂಕೋರ್ಟ್‌ 2016 ಅಕ್ಟೋಬರ್ 26ರಲ್ಲಿ ನೀಡಿದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎಲ್ಲ ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್‌, ಗುರುತಿನ ಚೀಟಿ, ವೇತನ ಪಾವತಿ ಚೀಟಿ ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿ ಜೆಸ್ಕಾಂ ಮುಖ್ಯ ಅಧೀಕ್ಷಕ ಎಂಜಿನಿಯರ್‌ ಅವರಿಗೆ ಮನವಿ ಸಲ್ಲಿಸಿದರು.

ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಸರ್ಕಾರದ ನೇರ ನೇಮಕಾತಿ ಸಮಯದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪ್ರಾಮುಖ್ಯತೆ ನೀಡಬೇಕು. ಗುತ್ತಿಗೆದಾರರು ಕಾರ್ಮಿಕರ ಹೆಸರಿನಲ್ಲಿ ಭವಿಷ್ಯನಿಧಿ (ಪಿಎಫ್) ಖಾತೆ ತ್ವರಿತವಾಗಿ ತೆರೆಯಬೇಕು. ಪಿಎಫ್ ಹಣ ಜಮಾ ಮಾಡದಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಪಿಎಫ್ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

20 ವರ್ಷಗಳಿಂದ ಅಪಾಯಕಾರಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಜೀವ ರಕ್ಷಣೆ ಹಾಗೂ ಉದ್ಯೋಗ ಭದ್ರತೆ ಇಲ್ಲವಾಗಿದೆ. ಗುತ್ತಿಗೆ ಕಾರ್ಮಿಕರ ಕಾಯ್ದೆಯಡಿ ನೀಡಬೇಕಾದ ಸೌಲಭ್ಯ ನೀಡದೆ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಒಂದೆ ಇಲಾಖೆಯಲ್ಲಿ ಒಂದೇ ತೆರನಾದ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ವಾರದಲ್ಲಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮುದ್ದುರಂಗಪ್ಪ, ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಕಾರ್ಯದರ್ಶಿ ವೀರೇಶ ಸ್ವಾಮಿ ಮುದಗಲ್ಲ, ಸಿಐಟಿಯು ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕರಿಗೂಳಿ, ಸಾಯಿನಾಥ, ಮಹೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT