ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಲೆಕ್ಕಿಗ ಕೊಲೆ: ₹50 ಲಕ್ಷ ಪರಿಹಾರಕ್ಕೆ ಒತ್ತಾಯ

ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದಿಂದ ಪ್ರತಿಭಟನೆ
Last Updated 24 ಡಿಸೆಂಬರ್ 2018, 14:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರ ಮೇಲೆ ಮರಳು ಟಿಪ್ಪರ್ ಹಾಯಿಸಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಎಲ್ಲ ತಪ್ಪಿಸ್ಥರನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ಕೂಡಲೇ ₹50 ಲಕ್ಷ ಪರಿಹಾರ ಕೊಟ್ಟು, ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಸದಸ್ಯರು ಸಾಮೂಹಿಕ ರಜೆ ಹಾಕಿ ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ, ಉಪನ್ಯಾಸಕರ ಸಂಘ, ಕಂದಾಯ ಇಲಾಖೆಯ ನೌಕರರ ಸಂಘ, ಗ್ರಾಮ ಸಹಾಯ, ವಾಣಿಜ್ಯ ತೆರಿಗೆ ಇಲಾಖೆಯ ನೌಕರರ ಸಂಘದ ಹಾಗೂ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಸಾಹೇಬ್ ಪಟೇಲ್ ಅವರು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಸಂಘವು ಗಂಭಿರವಾಗಿ ಪರಿಗಣಿಸಿ ರಾಜ್ಯದಾದ್ಯಂತ ಎಲ್ಲ ಗ್ರಾಮ ಲೆಕ್ಕಿಗರು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಪೊಲೀಸ್‌ ಇಲಾಖೆಯ ಮಾದರಿಯಲ್ಲಿ ತಕ್ಷಣ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು. ಮೃತರ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಹಾಗೂ ಸರ್ಕಾರದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲಾರಿ ಚಾಲಕರು ಹಾಗೂ ಮರಳು ಬ್ಲಾಕ್ ಟೆಂಡರ್ ಪಡೆದವರ ಮೇಲೂ ಐಪಿಸಿ 352 ಕಾಯ್ದೆಯಡಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ದಾಖಲಾದ ಎಫ್‌ಐಆರ್ ಮಾರ್ಪಾಡಿಸಿ ತಾಲ್ಲೂಕು ದಂಡಾಧಿಕಾರಿಗಳೇ ಪಿರ್ಯಾದಿದಾರರಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು, ಅಕ್ರಮ ಮರಳು ಹಾಗೂ ಗಣಿಗಾರಿಕೆ ಸಂಬಂಧಿಸಿದ ಕರ್ತವ್ಯಗಳಿಗೆ ಲೆಕ್ಕಾಧಿಕಾರಿಗಳನ್ನು ನಿಯೋಜಿಸದಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಲೆಕ್ಕಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಅಂದಾನಗೌಡ ದಾನಪ್ಪಗೌಡ್ರ, ಜಿಲ್ಲಾ ಘಟಕದ ಅಧ್ಯಕ್ಷ ಹನುಮೇಶ ಹೂಗಾರ, ವಿವಿಧ ಜಿಲ್ಲೆಯ ಅಧ್ಯಕ್ಷರಾದ ಸಿದ್ಧಯ್ಯ ಹಿರೇಮಠ, ಆಸೀಫ್, ವಿವಿಧ ನೌಕರರ ಸಂಘಗಳ ಅಧ್ಯಕ್ಷರಾದ ಮಹೆಬೂಬ್ ಪಾಷಾ ಮೂಲಿಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಎನ್.ಮಲ್ಲಿಕಾರ್ಜುನ, ಲಕ್ಷ್ಮಪ್ಪ, ಶಕೀಲ್ ಅಹಮ್ಮದ್, ನರಸಪ್ಪ ಭಂಡಾರಿ, ವೀರಭದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT