ಶುಕ್ರವಾರ, ನವೆಂಬರ್ 22, 2019
20 °C

ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಲು ಮನವಿ

Published:
Updated:

ರಾಯಚೂರು: ಪ್ರವಾಹಕ್ಕೊಳಗಾದ ಗ್ರಾಮಗಳನ್ನು ಸ್ಥಳಾಂತರಗೊಳಿಸಿ ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ನಿರಂತರ ನೀರು ಸರಬರಾಜು ಯೋಜನೆಗೆ ಅನುದಾನ ಬಿಡುಗಡೆಯಾಗಿದ್ದರೂ, ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳದೇ ಹಣ ಲಪಟಾಯಿಸುವ ಕೆಲಸವಾಗುತ್ತಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಜರುಗಿಸಬೇಕು.

ಒಪೆಕ್ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಬಿಡುಗಡೆಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ನಡೆಸಬೇಕು. ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ಎಲ್ಲ ವಿಭಾಗಗಳಿಗೆ ವೈದ್ಯರನ್ನು ನೇಮಿಸಬೇಕು. ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಿಗೆ ಹೋಗದಂತೆ ಇಲ್ಲಿಯೇ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ದೊರೆಯಬೇಕು. ಆಸ್ಪತ್ರೆ ಸ್ಥಾಪನೆಯ ಮೂಲ ಉದ್ದೇಶದಂತೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿನೋದರೆಡ್ಡಿ, ರಮೇಶ ಪಡಕೋಟೆ, ವಿರೂಪಾಕ್ಷಿ, ಕೆ.ರಾಜೇಶ ಹೊನ್ನಿ, ವಿಶ್ವನಾಥಸ್ವಾಮಿ, ರಾಹುಲ್, ನಾಗರಾಜ ಇದ್ದರು.

ಪ್ರತಿಕ್ರಿಯಿಸಿ (+)