ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ, ವಸತಿ ಹಕ್ಕುಪತ್ರಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ 14ರಂದು

Last Updated 6 ಆಗಸ್ಟ್ 2019, 12:55 IST
ಅಕ್ಷರ ಗಾತ್ರ

ರಾಯಚೂರು: ಭೂಮಿ, ವಸತಿ ನಿವೇಶನ ಹಕ್ಕುಪತ್ರ ನೀಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದಿಂದ ಆಗಸ್ಟ್ 14ರಂದು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಕಾಕರಗಲ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1969ರ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ 50ರಷ್ಟು ಭೂಮಿ ಮೀಸಲಿಡಬೇಕು. ಆದರೆ, ಅಧಿಕಾರಶಾಹಿಗಳು ಇದರ ಅರಿವಿದ್ದರೂ, 1991 ಮತ್ತು 1999ರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭೂಮಿ ಹೊಂದಿದ್ದ ಶ್ರೀಮಂತರಿಗೆ ಅಕ್ರಮವಾಗಿ ಮಂಜೂರಾತಿ ನೀಡಿದ್ದಾರೆ. ನಿಯಮಬಾಹಿರ ಭೂ ಮಂಜೂರಾತಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜಕಾರಣಿಗಳು, ಮಠಮಾನ್ಯಗಳು, ಮದ್ಯ, ಮಟಕಾ, ಮರಳು ಮಾಫಿಯಾಗಳು ಸೇರಿದಂತೆ ಬಲಾಢ್ಯರು ಕಾನೂನು ಬಾಹಿರವಾಗಿ ಕಬಳಿಸಿರುವ ಬೇನಾಮಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಭೂಮಿತಿ ಕಾಯ್ದೆ ಸಡಿಲಗೊಳಿಸಿ ಭೂಹೀನ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ತುಂಡು ಭೂಮಿಯೂ ಇಲ್ಲದ ಬಡವರು ಉಪಜೀವನಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗಿದ್ದಾರೆ. ಸ್ವಾತಂತ್ರ್ಯ ಬಂದು ಏಳೂ ದಶಕಗಳು ಕಳೆದರೂ, ಬಡವರಿಗೆ ಮನೆಗಳಿಲ್ಲ. ಕಟ್ಟಿಕೊಂಡ ಮನೆಗಳಿಗೆ ಹಕ್ಕು ಪತ್ರಗಳಿಲ್ಲ. ಸರ್ಕಾರ ಹಕ್ಕುಪತ್ರ ನೀಡಿದ್ದರೂ, ನಿವೇಶನ ಗುರುತಿಸಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಹಲವುಬಾರಿ ಹೋರಾಟದ ಮೂಲಕ ಜಿಲ್ಲಾಡಳಿತ ಗಮನಕ್ಕೆ ತರಲಾಗಿದೆ. ಆದರೂ, ಸಮಸ್ಯೆಗಳನ್ನು ಬಗೆಹರಿಸದೇ ದಲಿತ ವಿರೋಧಿಯಾಗಿ ನಡೆದುಕೊಳ್ಳಲಾಗುತ್ತಿದೆ. ಆದ್ದರಿಂದ ದಲಿತರ ಮೂಲ ಹಕ್ಕುಗಳನ್ನು ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

2009ರ ನೆರೆ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳು ಇಂದಿಗೂ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ. ಇದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಿದ್ದು, ದೇವದುರ್ಗ ಕ್ಷೇತ್ರದ ಶಾಸಕರು ದಲಿತರಿಗೆ ಮನೆಗಳನ್ನು ನೀಡದೇ ಹಿಂಬಾಲಕರಿಗೆ ನೀಡುತ್ತಿದ್ದಾರೆ. ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹನುಮಂತ ವೆಂಕಟಾಪುರ, ಷಣ್ಮುಖಪ್ಪ ಘಂಟಿ, ಮಲ್ಲಿಕಾರ್ಜುನ ಜೊಂಡೆ, ನಲ್ಲಾರೆಡ್ಡಿ ನಾಯಕ, ಲಿಂಗಪ್ಪ, ಶಿವಪ್ಪ, ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT