ಪರಿಶಿಷ್ಟ ಜಾತಿಗೆ ಶೈಕ್ಷಣಿಕ, ಉದ್ಯೋಗ ಮೀಸಲಾತಿ ಹೆಚ್ಚಿಸಲು ಒತ್ತಾಯ

7

ಪರಿಶಿಷ್ಟ ಜಾತಿಗೆ ಶೈಕ್ಷಣಿಕ, ಉದ್ಯೋಗ ಮೀಸಲಾತಿ ಹೆಚ್ಚಿಸಲು ಒತ್ತಾಯ

Published:
Updated:

ರಾಯಚೂರು: ಪರಿಶಿಷ್ಟ ಜಾತಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮತ್ತು ಆರ್ಥಿಕ ಮೀಸಲಾತಿಯನ್ನು ನೀಡಲಾಗಿದೆ. ಅದೇ ರೀತಿ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿಯಲ್ಲೂ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ ಹೆಚ್ಚಿಸಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ಇದಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ. ಪರಿಶಿಷ್ಟ ಸರ್ಕಾರಿ ಅಧಿಕಾರಿಗಳ ಮುಂಬಡ್ತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ಹಾಗಿದ್ದರೂ ರಾಜ್ಯದಲ್ಲಿ ಮುಂಬಡ್ತಿ ನೀಡುವ ವಿಚಾರವಾಗಿ ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನಾಲ್ಕು ಮಂದಿ ಪರಿಶಿಷ್ಟ ಪಂಗಡದ ಸಚಿವರಿದ್ದರು. ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರು ಮಾತ್ರ ಸಚಿವರಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಯಾದ ಪರಿಶಿಷ್ಟ ಪಂಗಡದ ಏಕೈಕ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಂಪುಟ ಪುನರಚನೆಯಲ್ಲಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ. ಇದರೊಂದಿಗೆ ನಿಗಮ, ಮಂಡಳಿಗಳ ನೇಮಕದಲ್ಲಿ 10 ಸ್ಥಾನಗಳನ್ನು ಪರಿಶಿಷ್ಟ ಪಂಗಡದವರಿಗೆ ನೀಡುವುದಕ್ಕೆ ಕೇಳಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಪಂಗಡದ 10 ಶಾಸಕರಿದ್ದಾರೆ. ಇಬ್ಬರನ್ನು ಸಚಿವರನ್ನಾಗಿ ಮಾಡುವುದಕ್ಕೆ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಕೋರಿದ್ದೇವೆ. ಸಮುದಾಯದ ಅಭಿವೃದ್ಧಿಗಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕೆಲವರು ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಇದಕ್ಕಾಗಿ ಒತ್ತಡ ಹೇರಲು ಅಕ್ಟೋಬರ್‌ 15 ರಂದು ಕಲಬುರ್ಗಿಯಲ್ಲಿ ಬೃಹತ್‌ ಹೋರಾಟ ಆಯೋಜಿಸಲಾಗಿದೆ. ಅಕ್ಟೋಬರ್‌ 24 ರಂದು ವಾಲ್ಮೀಕಿ ಜಯಂತಿ ಇದ್ದು, ವಾಲ್ಮೀಕಿ ಸಮುದಾಯದ ಬಗ್ಗೆ ನಿಜವಾಗಿಯೂ ಸರ್ಕಾರಕ್ಕೆ ಕಾಳಜಿ ಇದ್ದರೆ; ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ರಘುವೀರ ನಾಯಕ, ನಂದಕುಮಾರ್‌, ರವಿ ಪಾಟೀಲ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !