ಮಂಗಳವಾರ, ಸೆಪ್ಟೆಂಬರ್ 17, 2019
24 °C

ಉದ್ಯೋಗ ಭದ್ರತೆಗೆ ಅಸಂಘಟಿತರ ಒತ್ತಾಯ

Published:
Updated:
Prajavani

ರಾಯಚೂರು: ಅಸಂಘಟಿತ, ಸಂಘಟಿತ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ಕಲ್ಪಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ಸ್ಕೀಂ ನೌಕರರನ್ನು ಕಾಯಂಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದೇಶದ ಸಂಪತ್ತನ್ನು ಸೃಷ್ಠಿ ಮಾಡುವವರು ರೈತರು, ಕಾರ್ಮಿಕರನ್ನು ಸಂಕಷ್ಟಕ್ಕೆ ಇಡುಮಾಡುವ ಸರಿಯಲ್ಲ. ಇದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದರು.

ಸಂಘಟಿತ ಮತ್ತು ಸಂಘಟಿತ ಹಾಗೂ ಯೋಜನಾ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ 2006 ರ ಬೆಲೆ ಏರಿಕೆ ಸೂಚ್ಯಾಂಕ ಅಧಾರದ ಮೇಲೆ ₹ 18 ಸಾವಿರ ನಿಗದಿಪಡಿಸಬೇಕು. ಬೆಲೆ ಏರಿಕೆಗೆ ತಕ್ಕ ರೀತಿಯಲ್ಲಿ ತುಟ್ಟಿ ಭತ್ಯೆಯನ್ನು ಒಳಗೊಂಡು ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ನಿಗದಿಗೊಳಿಸಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಅನುದಾನ ಹೆಚ್ಚಳ ಮಾಡಬೇಕು, ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ತಾಲ್ಲೂಕು ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕೆಪಿಆರ್‌ಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ ವೀರೇಶ ಪದಾಧಿಕಾರಿಗಳಾದ ರಂಗನಗೌಡ, ಸತ್ಯಪ್ಪ, ಎಂ.ಶರಣೇಗೌಡ, ರಂಗಪ್ಪ ಯಾಪಲದಿನ್ನಿ ನೇತೃತ್ವ ವಹಿಸಿದ್ದರು.

Post Comments (+)