ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

7
‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ವಿಶೇಷ ರೀತಿಯ ಪ್ರತಿಭಟನೆ

ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯ

Published:
Updated:
Deccan Herald

ರಾಯಚೂರು: ನಿಶ್ಚಿತ ರೂಪದಲ್ಲಿ ದೊರೆಯುತ್ತಿದ್ದ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಜಿಲ್ಲಾ ಘಟಕದ ಸದಸ್ಯರು ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಎದುರು ‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ಘೋಷಣೆಯಡಿ ವಿನೂತನ ರೀತಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸರ್ಕಾರಿ ನೌಕರರ ಭವನದೊಳಗೆ ರಕ್ತದಾನ ಮಾಡುವುದು ಒಂದು ಕಡೆ ನಡೆದಿತ್ತು; ಇನ್ನೊಂದೆಡೆ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಘೋಷಣೆಗಳನ್ನು ಕೂಗಿ ಹಕ್ಕೋತ್ತಾಯ ಮಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆಯಿತು.

2004ರ ಜ.1ರಿಂದ ಕೇಂದ್ರ ಸರ್ಕಾರಿ ನೌಕರರು ಹಾಗೂ 2006 ಏ.1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ನಿಗದಿತ ಪಿಂಚಣಿ ರದ್ದುಪಡಿಸಿ ನೂತನ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಇದು ನೌಕರರ ವಿರೋಧಿ ಯೋಜನೆಯಾಗಿದೆ. ಬದುಕಿನ ಸಂಧ್ಯಾಕಾಲದಲ್ಲಿ ಅವರನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಜಾರಿಗೆ ಬಂದ ದಿನದಿಂದಲೂ ಸಂಘದಿಂದ ರಾಜ್ಯದಾದ್ಯಂತ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತ ಬರಲಾಗಿದೆ. ಆದರೆ, ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಈ ಸಲ ಸರ್ಕಾರದ ಕಣ್ಣು ತೆರೆಸಲು ರಾಜ್ಯದಾದ್ಯಂತ ರಕ್ತದಾನ ಮಾಡಲಾಗುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಹಳೆ ಪಿಂಚಣಿ ಯೋಜನೆ ಮುಂದುವರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರವಾಗುತ್ತದೆ ಎಂದು ನೌಕರರು ಹೇಳಿದರು.

ನೌಕರರು ಹಾಗೂ ಅವಲಂಬಿತ ಕುಟುಂಬದ ಸದಸ್ಯರು ಬೀದಿಪಾಲಾಗುವ ಪರಿಸ್ಥಿತಿ ತಲೆದೋರಿದೆ. ಇದಕ್ಕೆಲ್ಲಾ ಎನ್‌ಪಿಎಸ್‌ ಯೋಜನೆಯು ಕಾರಣವಾಗುತ್ತಿದ್ದು, ಕೂಡಲೇ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್‌ ವೃತ್ತದಲ್ಲಿ ಸಂಜೆವರೆಗೂ ಪ್ರತಿಭಟನೆ ನಡೆಸಿದ ನೌಕರರು, ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಬಿರಾದಾರ, ಕಾರ್ಯದರ್ಶಿಗಳಾದ ಈರಣ್ಣ, ಭೀಮೇಶ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !