ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಅಭಿವೃದ್ಧಿಗೆ ಯೋಜನೆ ರಚನೆಗೆ ಒತ್ತಾಯ

ಎಸ್‌ಎಫ್‌ಐ ಜಿಲ್ಲಾ ಘಕಟದಿಂದ ಪ್ರತಿಭಟನೆ
Last Updated 5 ಅಕ್ಟೋಬರ್ 2019, 13:16 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ರಚಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಶನಿವಾರ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳ ಅಭಿವೃದ್ಧಿಗಾಗಿ 371 ಜೆ ಕಾಯ್ದೆ ಜಾರಿ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು, ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯ ಅನುಷ್ಠಾನಗೊಳಿಸಲು ಕೋಟ್ಯಂತರ ರೂಪಾಯಿ ಬಿಡುಗಡೆಯಾಗುತ್ತಿದೆ. ಆದರೆ, ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಅಸಡ್ಡೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಮಂಡಳಿ ರಚನೆಯಾಗಿ ಆರು ವರ್ಷಗಳು ಕಳೆದರೂ, ಇಲ್ಲಿಯ ಅಸಮಾನತೆ ದೂರವಾಗಿಲ್ಲ. ರಸ್ತೆಗಳು ಸುಧಾರಣೆಯಾಗಿಲ್ಲ. ಶಾಲಾ– ಕಾಲೇಜು ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 6,730 ಹುದ್ದೆಗಳು ಖಾಲಿಯಿವೆ. ಕಾಲೇಜುಗಳಲ್ಲಿ 1 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಕೇಂದ್ರಿಯ ವಿಶ್ವವಿದ್ಯಾಲಯ ಸೇರಿ ಆರು ವಿಶ್ವವಿದ್ಯಾಲಯಗಳಲ್ಲಿ ಬಹಳ ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ ಎಂದು ದೂರಿದರು.

ಪ್ರತೀ ವರ್ಷವೂ ಕ್ರಿಯಾ ಯೋಜನೆ ರಚನೆ ಮಾಡಲು ವಿಳಂಬ ಮಾಡಲಾಗುತ್ತದೆ. ಇಲ್ಲದಿದ್ದರೆ ಜಾರಿಗೆ ಆಸಕ್ತಿ ತೋರುವುದಿಲ್ಲ. ಹಾಗಾಗಿ ಬಂದ ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಸ್‌ ಹೋಗುತ್ತಿದೆ. ಆದ್ದರಿಂದ ಈ ಬಾರಿ ಕ್ರಿಯಾ ಯೋಜನೆಯಲ್ಲಿ ಶಾಲಾ– ಕಾಲೇಜುಗಳ ಮೂಲ ಸೌಕರ್ಯಕ್ಕೆ ಒತ್ತುನೀಡಿ ಸ್ಮಾರ್ಟ್‌ ತರಗತಿಗಳನ್ನು ನಡೆಸಲು ಎಲ್‌ಇಡಿ ಪ್ರೊಜೆಕ್ಟರ್ ವಿತರಿಸಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ, ಬಿಸಿಎಂ, ಅಲ್ಪ ಸಂಖ್ಯಾತ ಇಲಾಖೆ ವ್ಯಾಪ್ತಿಯ ವಸತಿ ನಿಲಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ವಸತಿ ನಿಲಯ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹3500 ಆಹಾರ ಭತ್ಯೆ ನೀಡಬೇಕು. ಗ್ರಂಥಾಲಯ ಸೌಲಭ್ಯ ನೀಡಲು ಶಾಲಾ– ಕಾಲೇಜುಗಳಲ್ಲಿ ಗ್ರಂಥಾಲಯ ಬಲಪಡಿಸಬೇಕು. ಅಗತ್ಯ ಪುಸ್ತಕಗಳನ್ನು ಪೂರೈಸಬೇಕು. ಅಪೌಷ್ಟಿಕತೆ ಬಳಲು ವಿದ್ಯಾರ್ಥಿಗಳು ರಕ್ತಹೀನತೆ ಕಾಯಿಲೆಗೆ ತುತ್ತಾಗುತ್ತಿದ್ದು, ಶಾಲಾ– ಕಾಲೇಜುಗಳಲ್ಲಿ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮಂಡಳಿಯ ಅನುದಾನದಲ್ಲಿ ಶಿಷ್ಯ ವೇತನ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌, ಕೆಎಎಸ್‌, ಪಿಡಿಒ, ಪೊಲೀಸ್ ಹಾಗೂ ಬ್ಯಾಂಕಿಂಗ್‌ ಸೇರಿ ಇತರೆ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಆರ್ಥಿಕ ಸಹಾಯ ಮಾಡಬೇಕು. ವಸತಿ ನಿಲಯ ವಂಚಿತ ವಿದ್ಯಾರ್ಥಿಗಳಿಗೆ ಕೊಠಡಿ ಹಾಗೂ ಆಹಾರ ಭತ್ಯೆಯಾಗಿ ₹ 2 ಸಾವಿರ ಭತ್ಯೆ ನೀಡಬೇಕು ಎಂದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾ ಕಾರ್ಯದರ್ಶಿ ರಮೇಶ್ ವೀರಾಪೂರ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜ್ ಕಂದಗಲ್, ಡಿವೈಎಫ್ಐ ಮುಖಂಡ ಶಿವಪ್ಪ ಬ್ಯಾಗವಾಟ್, ದಿಲ್‌ಶಾದ್, ರಾಜೇಶ್ವರಿ, ರಶಿದಾ, ಹಜರತ್ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT