ಗುರುವಾರ , ಆಗಸ್ಟ್ 18, 2022
27 °C
371–ಜೆ ಕಲಂ ಅಡಿ ನೇಮಕಾತಿ ಆದೇಶ, ಅನ್ಯಾಯ ಸರಿಪಡಿಸಲು ಒತ್ತಾಯ

ರಾಯಚೂರು: ಕಲ್ಯಾಣ ಕರ್ನಾಟಕ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯ ಸರ್ಕಾರ ಸಂವಿಧಾನ 371(ಜೆ) ಅನುಷ್ಠಾನಕ್ಕಾಗಿ ಕಳೆದ ಜೂನ್ 15ರಂದು ಹೊರಡಿಸಿರುವ ಸುತ್ತೋಲೆಯಲ್ಲಿರುವ ಗೊಂದಲ ನಿವಾರಿಸಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಧರಣಿ ನಡೆಸಿದರು.

ಆನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇಧ 371ಜೆ ಅಡಿಯಲ್ಲಿ ರಚಿಸಲಾದ ಕಾನೂನು ಅನುಷ್ಠಾನಕ್ಕಾಗಿ ಸರ್ಕಾರದಿಂದ ಹಲವಾರು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಈ ಭಾಗದ ಅಭ್ಯರ್ಥಿಗಳಿಗೆ ಪ್ರತಿ ನೇಮಕಾತಿಯಲ್ಲಿ ವಿಭಿನ್ನ ರೀತಿಯ ಆಯ್ಕೆ ಪಟ್ಟಿ ತಯಾರಿಸುವ ಸುತ್ತೋಲೆಗಳಿಂದ ಗೊಂದಲ ಆಗುತ್ತಿದೆ ಎಂದು ದೂರಿದರು.

2015ರ ಮೇ 22ರ ಆದೇಶ ಮೊದಲನ ಬಾರಿ 371ಜೆ ಮೀಸಲಾತಿ ಕೋರಿರುವ ಅಭ್ಯರ್ಥಿಯನ್ನು ಬಹು ಆಯ್ಕೆಯ ವಿಧಾನವನ್ನು ಸೂಚಿಸಲಾಯಿತು. ಇದರ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ 2016ರ ನವೆಂಬರ್ 16ರಂದು ಸುತ್ತೋಲೆ ಹೊರಡಿಸಿ 371ಜೆ ಮೀಸಲಾತಿ ಕೋರಿರುವ ಅಭ್ಯರ್ಥಿಯನ್ನು ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದಕ್ಕೆ ಆಯ್ಕೆ ಮಾಡುವದು ನಂತರ ಸ್ಥಳೀಯ ವೃಂದದ ಹುದ್ದೆಗೆ ಪರಿಗಣಿಸುವಂತೆ ಸೂಚಿಸಲಾಗಿದೆ.

ಬಳಿಕ 2019ರ ಮೇ 23ರಂದು ಮಿಕ್ಕುಳಿದ ವೃಂದ, ಸ್ಥಳೀಯ ವೃಂದಕ್ಕೆ ಪ್ರತ್ಯೇಕವಾಗಿ ಎರಡು ಅಧಿಸೂಚನೆ, ಒಂದು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ತಯಾರಿಸಲು ಸೂಚಿಸಲಾಯಿತು. ಹಲವು ನೇಮಕಾತಿಗಳು ಈ ಸುತ್ತೋಲೆಯಂತೆ ನಡೆದಿವೆ. ಆನಂತರ 2020ರ ಜೂನ್ 6ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ವೃಂದಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ 2022ರ ಜೂನ್ 15ರಂದು ಮತ್ತೊಂದು ಸುತ್ತೋಲೆ ಹೊರಡಿಸಿ ಈಗಾಗಲೇ ನಡೆಯುತ್ತಿರುವ ಎಲ್ಲಾ ನೇಮಕಾತಿಗಳನ್ನು ಹಿಂದಿನ ಸುತ್ತೋಲೆಯಂತೆ ಮತ್ತು ಇನ್ನು ಮುಂದೆ ನಡೆಯುವ ನೇಮಕಾತಿಗಳನ್ನು ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳಿಗೆ ವೃಂದಗಳ ಆಯ್ಕೆಗೆ ಅವಕಾಶ, ಇನ್ನುಳಿದ ಹುದ್ದೆಗಳಿಗೆ ಎರಡೆರಡೂ ಅಧಿಸೂಚನೆ. ಎರಡು ಅರ್ಜಿ, ಎರಡು ಶುಲ್ಕ, ಎರಡು ಪರೀಕ್ಷೆ, ಎರಡು ಆಯ್ಕೆ ಪಟ್ಟಿ ರಚಿಸಲು ಸೂಚಿಸಲಾಗಿದೆ. ಇದರಿಂದ ನೇಮಕಾತಿ ಪ್ರಾಧಿಕಾರಗಳು ಮತ್ತು ಅಭ್ಯರ್ಥಿಗಳಲ್ಲಿ ಗೊಂದಲ ಉಂಟು ಮಾಡಿದೆ ಎಂದು ದೂರಿದರು.

ಪ್ರತಿಯೊಂದು ನೇಮಕಾತಿಗಳು ನ್ಯಾಯಾಲಯಗಳ ಮೊರೆ ಹೋಗುವ ಕಾರಣ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಕ್ಕಿರುವ ಸಂವಿಧಾನ ಬದ್ದ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು  ಆರೋಪಿಸಿದರು.

ಜಾರಿಯಲ್ಲಿರುವ ಎಲ್ಲಾ ಸುತ್ತೋಲೆಗಳನ್ನು ತಕ್ಷಣ ವಾಪಸ್ ಪಡೆದು  2016 ನವೆಂಬರ್ 16ರ ಸುತ್ತೋಲೆಯಂತೆ ಮೆರಿಟ್ ಆಧಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿಯನ್ನು ತಯಾರಿಸಬೇಕು. ನಂತರ ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ಸಿದ್ಧಪಡಿಸವಂತೆ ಹೊಸದಾಗಿ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡ ರಜಾಕ್ ಉಸ್ತಾದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಪದಾಧಿಕಾರಿ ಶಿವಕುಮಾರ ಯಾದವ, ವಿನೋದ ರೆಡ್ಡಿ, ರಮೇಶ ಹೀರಾ, ರಾಜೇಶ ಕುಮಾರ, ವಿಶ್ವನಾಥ ಪಟ್ಟಿ, ಖಲೀಲ್ ಪಾಶ, ಡಿ.ವಿರೇಶ, ಮಹಮ್ಮದ್ ರಫಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.