ಶುಕ್ರವಾರ, ಮಾರ್ಚ್ 5, 2021
27 °C
ಚಂದ್ರಬಂಡಾ, ಕಡಗಂದೊಡ್ಡಿ, ಅರಸಿಗೇರಾ ಗ್ರಾಮದ ಭೂ ಸಂತ್ರಸ್ತರಿಂದ ಪ್ರತಿಭಟನೆ

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು- ಗದ್ವಾಲ್ ರೈಲು ಮಾರ್ಗಕ್ಕೆ ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರದ ಹಣ ನೀಡಬೇಕು ಎಂದು ಒತ್ತಾಯಿಸಿ ನಗರದ ಹಾಗೂ ತಾಲ್ಲೂಕಿನ ಚಂದ್ರಬಂಡಾ, ಕಡಗಂದೊಡ್ಡಿ, ಅರಸಿಗೇರಾ ಗ್ರಾಮದ ಭೂ ಸಂತ್ರಸ್ತರು ಉಪವಿಭಾಗಾಧೀಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ರೈಲು ಮಾರ್ಗ ನಿರ್ಮಾಣಕ್ಕೆ 2003-04ರಲ್ಲಿ ಹೆಚ್ಚುವರಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿತ್ತು. ಮೊದಲ ಹಂತದ ಭೂ ಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಚಂದ್ರಬಂಡಾದಲ್ಲಿ 6 ಎಕರೆ 23 ಗುಂಟೆ, ಅರಸಿಗೇರಾದಲ್ಲಿ 5 ಎಕರೆ 39 ಗುಂಟೆ, ಕಡಗಂದೊಡ್ಡಿಯಲ್ಲಿ 16 ಗುಂಟೆ ಹಾಗೂ ರಾಯಚೂರಿನಲ್ಲಿ 1ಎಕರೆ 24 ಗುಂಟೆ ಸ್ವಾಧೀನ ಮಾಡಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿಗಳಿಗೆ 2006–07ರಲ್ಲಿ ಪರಿಹಾರ ನೀಡಲಾಗಿದೆ. ಕಡಗಂದೊಡ್ಡಿಯ ಜಮೀನಿಗೆ ₨6.50 ಲಕ್ಷ, ಚಂದ್ರಬಂಡಾ ಜಮೀನಿಗೆ ₹5.50 ಲಕ್ಷ ಹಾಗೂ ಅರಸಿಗೇರಾ ಜಮೀನಿಗೆ ₹4.50 ಲಕ್ಷ ಎಕರೆವಾರು ಪರಿಹಾರ ನೀಡಲಾಗಿದೆ. ಆದರೆ, ಎರಡನೇ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಭೂಮಿಗೆ ಪರಿಹಾರ ನೀಡಿಲ್ಲ ಎಂದು ದೂರಿದರು.

2006–07ರಕ್ಕು ಭೂ ಸ್ವಾಧೀನ ಪ್ರಕ್ರಿಯೆಯ ನೋಟಿಫಿಕೇಷನ್ ಮಾಡಲು ರೈಲ್ವೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಆದರೆ, ಇದುವರೆಗೆ ನೋಟಿಫಿಕೇಷನ್‌ ಆಗಿಲ್ಲ. ಪರಿಹಾರವೂ ಪಾವತಿಸಿಲ್ಲ. ಮೇಲ್ಸೇತುವೆ ನಿರ್ಮಾಣಕ್ಕೆ 2017ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸದೇ ಅರಸಿಗೇರಾ ರೈತರೊಂದಿಗೆ ನೇರವಾಗಿ ಚರ್ಚಿಸಿ ಎಕರೆಗೆ ₹6.32 ಲಕ್ಷದಂತೆ ಖರೀದಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿದ ಜಮೀನು ಸ್ವಾಧೀನ ಪ್ರಕ್ರಿಯೆ ಮಾಡಿ ಪರಿಹಾರ ಪಾವತಿಸಲು ಒತ್ತಾಯಿಸಿದರೂ, ಪರಿಹಾರ ಪಾವತಿಸಿಲ್ಲ ಎಂದು ಆರೋಪಿಸಿದರು.

ಈಗ ಹಳೆ ಕಾಯ್ದೆಯ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ಮಾಡಲು ತೊಂದರೆಯಾಗುತ್ತಿದ್ದು, ಹೊಸ ಭೂ ಸ್ವಾಧೀನ ಕಾಯ್ದೆಯಡಿ ಭೂ ಸ್ವಾಧೀನ ಪ್ರಕ್ರಿಯೆ ಮಾಡಲು ವಿಳಂಬವಾಗುತ್ತದೆ. ಆದ್ದರಿಂದ ಅರಸಿಗೇರಾ ರೈತರೊಂದಿಗೆ ಸಂಧಾನಸಭೆ ನಡೆಸಿದಂತೆ ಸಭೆ ನಡೆಸಿ ಮಾರುಕಟ್ಟೆ ಬೆಲೆ ನಿಗದಿಪಡಿಸಿ ನೇರವಾಗಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದ ಮನವಿ ಉಪವಿಭಾಗಾಧಿಕಾರಿಗೆ ಸಲ್ಲಿಸಿದರು.

ವಕೀಲ ವೆಂಕಟೇಶ ಗಣಮೂರು, ರೈತರಾದ ಜಂಪಾರೆಡ್ಡಿ, ಹನುಮಂತರೆಡ್ಡಿ, ಖಾದರಸಾಬ್, ಸೂಗಪ್ಪ, ನರಸರೆಡ್ಡಿ, ಬುಡ್ಡ ಹನುಮಂತ, ಮಲ್ಲೇಶ, ಈರಣ್ಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.