ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿವಿ ಸ್ಥಾಪನೆ ವಿಳಂಬ: 24 ರಿಂದ ಪ್ರತಿಭಟನೆ

Last Updated 22 ಜೂನ್ 2019, 12:39 IST
ಅಕ್ಷರ ಗಾತ್ರ

ರಾಯಚೂರು:ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆನ್ನುವ ಕನಸು ನಿರಂತರ ಭಗ್ನವಾಗುತ್ತಿದ್ದು, ಸರ್ಕಾರವು ಅನುಸರಿಸುತ್ತಿರುವ ವಿಳಂಬ ಧೋರಣೆ ವಿರೋಧಿಸಿ ಮತ್ತು ರಾಜ್ಯಪಾಲರಿಗೆ ತುರ್ತು ವಿಷಯ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿ ಜೂನ್‌ 24 ರಿಂದ ಪ್ರತಿಭಟನೆ ಆರಂಭಿಸಲಾಗುವುದು ಎಂದು ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ಸಂಚಾಲಕ ಡಾ. ರಜಾಕ್‌ ಉಸ್ತಾದ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ 24 ರಂದು ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೆಲ್ಲ ಕೈ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಲಿದ್ದಾರೆ. 25 ರಂದು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜೂನ್‌ 26 ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರಾಯಚೂರಿಗೆ ಗ್ರಾಮವಾಸ್ತವ್ಯಕ್ಕೆ ಬಂದಾಗ ಈ ಬಗ್ಗೆ ವಿಷಯ ಮನವರಿಕೆ ಮಾಡಲಾಗುವುದು. ಜೂನ್‌ 28 ರೊಳಗಾಗಿ ರಾಜ್ಯಪಾಲರನ್ನು ಭೇಟಿ ಮಾಡುವ ಜರೂರತ್ತು ಇದೆ. ವಿಧಾನಮಂಡಲ ಅಧಿವೇಶನ ಆರಂಭವಾದರೆ, ವಿಶ್ವವಿದ್ಯಾಲಯ ಸ್ಥಾಪನೆ ಮತ್ತೆ ನನೆಗುದಿಗೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಿದರು.

ರಾಜ್ಯಪಾಲರು ಸುಗ್ರೀವಾಜ್ಞೆ ಕಡತಕ್ಕೆ ಸಹಿ ಹಾಕದೆ ಕಳುಹಿಸಿದ ಕಡತಕ್ಕೆ ಹಿಂಬರಹ ಬರೆಯುವ ಕಾರ್ಯವನ್ನು ಸರ್ಕಾರದ ಮಟ್ಟದಲ್ಲಿ ಯಾರೂ ಮಾಡುತ್ತಿಲ್ಲ. ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ತೋರಿಸಿದರೂ ಕೆಲಸ ಮಾಡಿಸುವಷ್ಟರ ಮಟ್ಟಿಗೆ ಪ್ರಭಾವ ಬೀರಿಲ್ಲ ಎಂದರು.

ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು 2016 ರಲ್ಲಿ ವಿಶ್ವವಿದ್ಯಾಲಯವನ್ನು ಘೋಷಣೆ ಮಾಡಿದ್ದಾರೆ. ಆದರೆ, ಆರಂಭವಾಗುವುದಕ್ಕೆ ಹಲವಾರು ವಿಘ್ನಗಳು ಎದುರಾಗುತ್ತಿವೆ. ಸದ್ಯ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವುದರಿಂದ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸುವುದು ಸಕಾಲಿಕವಾಗಿದೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಾಗುವ ಮೂಲ ಸೌಕರ್ಯಗಳು ಈಗಾಗಲೇ ಇದ್ದು, ಹೆಚ್ಚುವರಿ ಸೌಲಭ್ಯಗಳನ್ನು ಮುಂಬರುವ ದಿನಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ವಿಶ್ವವಿದ್ಯಾಲಯಕ್ಕೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿರುವುದರಿಂದ ತುರ್ತಾಗಿ ಕುಲಪತಿಯನ್ನು ನೇಮಕ ಮಾಡುವುದು ಅಗತ್ಯ ಬೀಳುವುದಿಲ್ಲ. ಜುಲೈ ಎರಡನೇ ವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವುದರಿಂದ ಜೂನ್‌ನಲ್ಲಿಯೇ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಆಗಬೇಕು. ಇವೆಲ್ಲ ಕಾರಣಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರದಿಂದ ಮಾಡಬೇಕಿದೆ ಎಂದು ತಿಳಿಸಿದರು.

ಈ ಭಾಗದ ಜನರ ತಾಳ್ಮೆ ಪರೀಕ್ಷೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೈಗೆ ಬಂದ ತತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಸ್ಥಿತಿ ರಾಯಚೂರಿಗೆ ಬಂದೊದಗಿದೆ. ಈ ವಿಷಯದಲ್ಲಿ ಹಲವು ಸಂಘ–ಸಂಸ್ಥೆಗಳು ಒಗ್ಗಟ್ಟು ಪ್ರದರ್ಶಿಸುತ್ತಿದ್ದು, ವಿಶ್ವವಿದ್ಯಾಲಯ ಸ್ಥಾಪನೆಗೆ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಹೋರಾಟಗಾರರಾದ ಅಂಬಣ್ಣ ಅರೋಲಿ, ಶಿವಕುಮಾರ ಯಾದವ, ಮೊಹ್ಮದ್‌ ರಫಿ, ಶರಣಬಸವ, ಥಾಮಸ್‌ ಬೆಂಜಮಿನ್‌, ಅಶೋಕಕುಮಾರ ಜೈನ್‌, ರಾಕೇಶ ರಾಜಲಬಂಡಿ, ಮುರುಳಿಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT