ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿವಿ ಶೀಘ್ರ ಸ್ಥಾಪನೆಗೆ ಒತ್ತಾಯ

Last Updated 25 ಜೂನ್ 2019, 14:18 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೇ ತಿರಸ್ಕರಿಸಿರುವುದರಿಂದ ಶೀಘ್ರದಲ್ಲಿ ವಿವಿ ಸ್ಥಾಪನೆಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ಸದಸ್ಯರು ನಗರದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಟೈರ್‌ಗೆ ಬೆಂಕಿಹಚ್ಚಿ ಮಂಗಳವಾರ ಪ್ರತಿಭಟನೆ ನಡೆಸಿದರು.

2017ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನು ಒಳಗೊಂಡು ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿಯ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ, ಒಂದು ವರ್ಷದ ಕಾಯ್ದೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ ಎಂದು ದೂರಿದರು.

2019ರ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿವಿ ಸ್ಥಾಪನೆಗೆ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅನುಮೋದನೆ ಕಳಿಸಲಾಗಿತ್ತು. ಆದರೆ, ರಾಜ್ಯಪಾಲರು ಸುಗ್ರೀವಾಜ್ಞೆಗೆ ವಿನಾಕಾರಣ ಪ್ರಶ್ನೆ ಮಾಡಿದ್ದು, ಸುಗ್ರೀವಾಜ್ಞೆ ತರುವ ಸಂದರ್ಭವೇನಿದೆ ಎಂದು ಪ್ರಶ್ನಿಸಿ ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ತ್ವರಿತವಾಗಿ ವಿವಿ ಸ್ಥಾಪನೆ ಮಾಡದಿದ್ದರೆ ಕಾಯ್ದೆ ಮಾಡುವುದು ಮತ್ತಷ್ಟು ವಿಳಂಬವಾಗಲಿದೆ. ಅಧಿವೇಶನ ಆರಂಭದಲ್ಲಿ ಸುಗ್ರೀವಾಜ್ಞೆ ಹೊರ ತರಲು ಸಾಧ್ಯವಾಗಲ್ಲ. ಆದ್ದರಿಂದ ಪ್ರಸಕ್ತ ಸಾಲಿನಿಂದಲೇ ವಿವಿ ಆರಂಭವಾಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವರೊಂದಿಗೆ ರಾಜ್ಯಪಾಲರ ಬಳಿಗೆ ತೆರಳಿ ಮನವರಿಕೆ ಮಾಡುವುದು ಅವಶ್ಯವಾಗಿದೆ ಎಂದರು.

ವಿವಿಗೆ ವಿಶೇಷ ಅಧಿಕಾರಿಯೂ ನೇಮಕ ಮಾಡಲಾಗಿದ್ದು, ವಿಧಾನ ಮಂಡಲದ ಅಧಿವೇಶನಕ್ಕಿಂತ ಮುಂಚಿತವಾಗಿ ರಾಜ್ಯಪಾಲರಿಗೆ ಮನವರಿಕೆ ಮಾಡಬೇಕು. ಈ ಎಲ್ಲ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮೇಲುಸ್ತುವಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಸಂಚಾಲಕ ರಜಾಕ್ ಉಸ್ತಾದ್, ಅಶೋಕಕುಮಾರ ಜೈನ, ಸುರೇಶ ಹೀರಾ, ಸಿರಾಜ್ ಜಾಫ್ರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT