ಭಾನುವಾರ, ಅಕ್ಟೋಬರ್ 20, 2019
22 °C
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಧರಣಿ

ಲಂಚ ಕೇಳಿದ ಅಧಿಕಾರಿ ವಜಾಗೊಳಿಸಲು ಒತ್ತಾಯ

Published:
Updated:
Prajavani

ರಾಯಚೂರು: ಅನುಕಂಪದ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಗೆ ಹುದ್ದೆ ನೀಡಲು ಲಂಚ ಕೇಳುತ್ತಿರುವ ಸಿಡಿಪಿಒ ಡಿ.ವೀರನಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ನೌಕರರು ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಶುಕ್ರವಾರ ಧರಣಿ ನಡೆಸಿದರು.

ಅನುಕಂಪದ ಆಧಾರದಲ್ಲಿ ತರುಣಾಶ್ರೀ ಅವರಿಗೆ ಉದ್ಯೋಗ ನೀಡಲು ಲಂಚ ಕೇಳುತ್ತಿರುವ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು. ತರುಣಾಶ್ರೀಗೆ ಕಾರ್ಯಕರ್ತೆ ಉದ್ಯೋಗ ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಬೇಡಿಕೆ ಪ್ರಕಾರ ಸರಬರಾಜು ಮಾಡಬೇಕು. ಬಾಕಿಯಿರುವ ವೇತನ ಪಾವತಿಗೆ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಸಹಾಯಕಿ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಬಡ್ತಿ ನೀಡಲು ಲಂಚ ಕೇಳುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಪ್ರತಿ ತಿಂಗಳು ತರಕಾರಿ ಹಾಗೂ ಗ್ಯಾಸ್ ಹಣ ಬಿಡುಗಡೆ ಮಾಡಬೇಕು. ಅಕ್ಟೋಬರ್ 2018ರಲ್ಲಿ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಕಾರ್ಯಕರ್ತೆಯರಿಗೆ ₹ 1,500 ಹಾಗೂ ಸಹಾಯಕಿಯರಿಗೆ ₹750 ಹಣವನ್ನು ಒಂದು ವರ್ಷದಿಂದ ನೀಡಿಲ್ಲ. ಬಾಕಿ ಆಗಿ ಬಿಡುಗಡೆ ಮಾಡಬೇಕು ಎಂದರು.

ದೇವದುರ್ಗ ತಾಲ್ಲೂಕಿನಲ್ಲಿ ಕಳಪೆ ಆಹಾರ ನೀಡಲಾಗುತ್ತಿದ್ದು, ಸರಿಪಡಿಸಬೇಕು. ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಇಡಿಗಂಟು ಕಳೆದ 3- 4 ವರ್ಷಗಳಿಂದ ನೀಡಿಲ್ಲ. ತ್ವರಿತವಾಗಿ ಬಿಡುಗಡೆ ಮಾಡಬೇಕು. ಲಿಂಗಸೂಗೂರು ಮತ್ತು ರಾಯಚೂರು ತಾಲ್ಲೂಕಗಳಲ್ಲಿ ಮರಣ ಹೊಂದಿರುವ ಕೆಲ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ₹ 50 ಸಾವಿರ ಪರಿಹಾರ ಹಣವೂ ವಿತರಿಸಿಲ್ಲ. ಶೀಘ್ರವಾಗಿ ನೀಡಬೇಕು ಎಂದು ಆಗ್ರಹಿಸಿದರು.

10 ವರ್ಷ ಸೇವೆ ಮಾಡಿದವರಿಗೆ ಎಂಟು ವರ್ಷಗಳಿಂದ ಇನ್ಕ್ರಿಮೆಂಟ್ ನೀಡಿಲ್ಲ. ಆದ್ದರಿಂದ 10 ವರ್ಷ ಮೇಲ್ಪಟ್ಟ ಎಲ್ಲ ಸಿಬ್ಬಂದಿಗೆ ಇನ್ಕ್ರಿಮೆಂಟ್ ನೀಡಬೇಕು. ಚುನಾವಣೆಯಲ್ಲಿ ಬಿಎಲ್‌ಒ ಕೆಲಸ ಮಾಡಿರುವ ಕಾರ್ಯಕರ್ತೆಯರಿಗೆ ಕೂಡ ಸರ್ಕಾರಿ ನೌಕರರಿಗೆ ನೀಡುವಂತೆ ₹ 10 ಸಾವಿರ ಭತ್ಯೆ ನೀಡಬೇಕು. ಅನ್ಯ ಇಲಾಖೆಯ ಕೆಲಸದ ಜವಾಬ್ದಾರಿ ವಹಿಸಬಾರದು. ದೇವದುರ್ಗ, ಸಿರವಾರ ಯೋಜನೆಗಳಲ್ಲಿ ಎಂಟು ತಿಂಗಳುಗಳಿಂದ ಮೊಟ್ಟೆ, ತರಕಾರಿ ಬಿಲ್ಲು ಬಾಕಿ ಇದ್ದು, ಬಿಡುಗಡೆ ಮಾಡಬೇಕು. ತುಂಟಾಪೂರು ಅಂಗನವಾಡಿ ಕಾರ್ಯಕರ್ತೆ ರಂಗಮ್ಮ ಅಮಾನತು ಆದೇಶ ವಾಪಸ್ ಪಡೆದು ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ರಂಗಮ್ಮ ಅನ್ವರ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಗಿರಿಯಪ್ಪ ಪೂಜಾರ ನೇತೃತ್ವ ವಹಿಸಿದ್ದರು.

Post Comments (+)