ಗುತ್ತಿಗೆ ಮುಂದುವರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

7
ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದಿಂದ ಸಚಿವರಿಗೆ ಮನವಿ

ಗುತ್ತಿಗೆ ಮುಂದುವರಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
Deccan Herald

ರಾಯಚೂರು: ರಾಜ್ಯ ಸರ್ಕಾರದಿಂದ ರದ್ದುಪಡಿಸಿರುವ ಗುತ್ತಿಗೆ ಪದ್ಧತಿ ಮುಂದುವರೆಸಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಜಿಲ್ಲಾಡಳಿತ ಹಾಗೂ ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮನವಿ ಸಲ್ಲಿಸಿದರು.

ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಿ, ನೇರವಾಗಿ ವೇತನ ಪಾವತಿ ಮಾಡಬೇಕು. 700 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ಆದೇಶವನ್ನು ರದ್ದುಪಡಿಸಬೇಕು. ಈ ಹಿಂದೆ ಜಾರಿಯಲ್ಲಿದ್ದ ಘನತ್ಯಾಜ್ಯ ವಿಲೇವಾರಿ ಪದ್ಧತಿ ಮುಂದುವರೆಸಬೇಕು. ಮೂರು ತಿಂಗಳಿಂದ ಎಂಟು ತಿಂಗಳವರೆಗೆ ಬಾಕಿಯಿರುವ ಕಾರ್ಮಿಕರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.

2016ರ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಬಾಕಿ ವೇತನ ನೀಡಬೇಕು. ನಗರಸಭೆ ಸಂಗ್ರಹಿಸುವ ಹಣವನ್ನು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಗುತ್ತಿಗೆ ಕಾಮಗಾರಿಗೆ ಪಾವತಿಸಲಾಗುತ್ತಿರುವ ನಗರಸಭೆಯ ವಿರುದ್ಧ ಕ್ರಮ ಜರುಗಿಸಬೇಕು. 2017ರಲ್ಲಿ ದಿನಗೂಲಿ ಕಾರ್ಮಿಕರ ಕಾಯಂಗೊಳಿಸುವ ನೆಪದಲ್ಲಿ ನಕಲಿ ಕಾರ್ಮಿಕರನ್ನು ಸೃಷ್ಟಿ ಮಾಡಿರುವುದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

15 ವರ್ಷಗಳಿಂದ ಎಲೆಕ್ಟ್ರಿಕಲ್ ವಿಭಾಗದ ಗುತ್ತಿಗೆ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಪಾವತಿಸದ ಏಜೆನ್ಸಿಯ ಠೇವಣಿ ಹಾಗೂ ಬಿಲ್ ತಡೆಹಿಡಿದು ಪಿಎಫ್ ಹಾಗೂ ಇಎಸ್‌ಐಗೆ ಬಾಕಿ ಹೊಂದಿಸಬೇಕು. ನೈರ್ಮಲ್ಯ ವಿಭಾಗದ ವಾಹನ, ಟಿಪ್ಪರ್ ಚಾಲಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು. 2015ರಿಂದ ಪಿಎಫ್, ಇಎಸ್‌ಐ ಹಣ ವಸೂಲಿ ಮಾಡಬೇಕು. 2016ರ ಆಗಸ್ಟ್‌ನಿಂದ ನವೆಂಬರ್‌ವರೆಗಿನ ಬಾಕಿ ವೇತನ ನೀಡಬೇಕು ಎಂದರು.

ನಗರಸಭೆ ಪ್ಯಾಕೇಜ್ ನಂಬರ್ 2, 4, 7ರ ಪಿಎಫ್‌, ಇಎಸ್ಐ 2012ರಿಂದ 2014ರವರೆಗೆ ಪಾವತಿಯಾಗಿಲ್ಲ. ಗುತ್ತಿಗೆದಾರರ ಬಿಲ್ ತಡೆಹಿಡಿದು ಪಾವತಿಗೆ ಕ್ರಮ ಜರುಗಿಸಬೇಕು. ಕಾರ್ಮಿಕರು ಮರಣ ಹೊಂದಿದರೆ ಕುಟುಂಬದ ಸದಸ್ಯರಿಗೆ ಕೆಲಸ ನೀಡಬೇಕು. ಶವ ಸಂಸ್ಕಾರಕ್ಕೆ ₹5 ಸಾವಿರ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆಯ ಎಲ್ಲ ಪ್ಯಾಕೇಜ್‌ಗಳಲ್ಲಿ ಕಡ್ಡಾಯವಾಗಿ ರಜೆಯ ರಜಿಸ್ಟರ್‌ ನಿರ್ವಹಿಸಿ ರಜೆಯ ಸೌಲಭ್ಯ ನೀಡಬೇಕು. ನೈರ್ಮಲ್ಯ ವಿಭಾಗದಲ್ಲಿ 20 ಜನರು ಕೆಲಸ ಮಾಡದೇ ವೇತನ ಪಡೆಯುತ್ತಿದ್ದು, ಇದನ್ನು ನಿಲ್ಲಿಸಬೇಕು. ಪೌರ ಕಾರ್ಮಿಕರೆಂದು ಕೆಲಸ ಮಾಡಿದ ಈಗಿನ ವಾಹನ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು. ಕೆಲಸದಿಂದ ತೆಗೆದು ಹಾಕಿರುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಎಸ್‌.ಮಾರೆಪ್ಪ, ಉರುಕುಂದಪ್ಪ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !