ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ವರ್ಗಕ್ಕೆ ₹4 ಸಾವಿರ ಕೋಟಿ ಅನುದಾನ ಕೊಡಿ’

Last Updated 2 ಡಿಸೆಂಬರ್ 2020, 15:29 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಹಿಂದುಳಿದ ಜನಾಂಗದ ಅಭಿವೃದ್ಧಿ ನಿಗಮಕ್ಕೆ ₹4 ಸಾವಿರ ಕೋಟಿ ಅನುದಾನ ನೀಡಬೇಕು ಹಾಗೂ ಮೀಸಲಾತಿಯನ್ನು ಶೇ 40 ಕ್ಕೆ ಹೆಚ್ಚಿಸಲು ಸರ್ಕಾರ ಕೂಡಲೇ ತೀರ್ಮಾನ ಕೈಗೊಳ್ಳದಿದ್ದರೆ ಹಿಂದುಳಿದ ಜಾತಿಯವರೆಲ್ಲ ಬೆಂಗಳೂರಿನವರೆಗೂ ಪಾದಯಾತ್ರೆ ಚಳವಳಿ ಆರಂಭಿಸಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೀಸಲಾತಿ ಹಾಗೂ ನಿಗಮಗಳ ಸ್ಥಾಪನೆಗೆ ಸಂಬಂಧಿಸಿದಂತೆ ಆತುರದ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ. ಅದೇ ರೀತಿ ಜನಸಂಖ್ಯೆಗೆ ಅನುಗುಣವಾಗಿ ಮುಖ್ಯವಾಹಿನಿಯಿಂದ ಹೊರಗಿರುವ ಹಿಂದುಳಿದ ಸಮುದಾಯಗಳ ಏಳ್ಗೆಗೂ ಸ್ಪಂದಿಸಬೇಕು ಎಂದು ತಿಳಿಸಿದರು.

ಮನವಿ ಮಾಡದ ಸಮುದಾಯಗಳನ್ನು ಗುರುತಿಸಿ ನಿಗಮ ಸ್ಥಾಪಿಸುತ್ತಿದ್ದಾರೆ. ಧ್ವನಿ ಎತ್ತುವುದಕ್ಕೂ ಸಾಧ್ಯವಿಲ್ಲದ ಅನೇಕ ಸಮುದಾಯಗಳಿವೆ. ಎಲ್ಲ ಜಾತಿಗೂ ಒಂದೊಂದು ನಿಗಮಗಳನ್ನು ಸ್ಥಾಪಿಸಲಿ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರು ಮತ್ತು ಬಲಾಢ್ಯರು ಇದ್ದಾರೆ. ದುರ್ಬಲರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲಾ ರಂಗದಲ್ಲೂ ಮುಂದುವರಿದ ಲಿಂಗಾಯತ ವೀರಶೈವ ಜನಾಂಗದಲ್ಲಿಯೇ ಇನ್ನೂ ಆರ್ಥಿಕವಾಗಿ ದುರ್ಬಲ ಇರುವವರಿಗಾಗಿ ₹500 ಕೋಟಿ ಸರ್ಕಾರ ನೀಡಿದೆ. ಅದೇ ರೀತಿ ಹಿಂದುಳಿದ ಜಾತಿಗಳನ್ನು ಪರಿಗಣಿಸಿ ಜನಸಂಖ್ಯೆ ಆಧರಿಸಿ ಅನುದಾನ ಹೆಚ್ಚಿಸಬೇಕು. ಸಮಾಜದಲ್ಲಿ ಮುಂದುವರಿದ ಜನರಿಗೂ ಶೇ 10 ಮೀಸಲಾತಿ ನೀಡಲಾಗಿದೆ. ಹಲವು ಸಮುದಾಯದವರು ಬೇಡಿಕೆ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.‌ ಯಾವುದೇ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಮೊದಲು ಅಧ್ಯಯನ ಮಾಡಿಸಿ, ವರದಿ ಪಡೆದು ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. ಕೇಳದವರಿಗೆ ಅನುದಾನ ನೀಡಲಾಗಿದೆ. ನಿಯಮಬದ್ಧ, ಕಾನೂನುಬದ್ಧವಾಗಿ ಮಾಡಬೇಕಿತ್ತು.ಕಾಂತರಾಜ ಅವರು ಜನಗಣತಿ ವರದಿ ನೀಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕೊಡಬೇಕು. ನಿಖರವಾಗಿರುವ ಅಂಕಿಅಂಶ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.

ಹನುಮಂತಪ್ಪ ಯಾದವ್‌, ಕಾಜನಗೌಡ, ಜಂಬಣ್ಣ ಯಕ್ಲಾಸಪುರ, ವಿ.ಬಸವರಾಜ, ವಿಜಯಭಾಸ್ಕರ್ ಹಾಗೂ ವಿವಿಧ ಹಿಂದುಳಿದ ಜಾತಿಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT