ಶುಕ್ರವಾರ, ಜನವರಿ 24, 2020
18 °C

ಗಬ್ಬೂರು ತಾಲ್ಲೂಕು ಕೇಂದ್ರ ಘೋಷಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇವದುರ್ಗಾ ತಾಲ್ಲೂಕಿನಲ್ಲಿ ಅವೈಜ್ಞಾನಿಕವಾಗಿ ಅರಕೇರಾ ಹೋಬಳಿಯನ್ನು ನೂತನ ತಾಲ್ಲೂಕು ಮಾಡಬೇಕೆನ್ನುವ ಪ್ರಸ್ತಾವನೆಯನ್ನು ರದ್ದುಗೊಳಿಸಿ; ಗಬ್ಬೂರು ಹೋಬಳಿಯನ್ನು ತಾಲ್ಲೂಕು ಕೇಂದ್ರ ಎಂದು ಘೋಷಿಸುವಂತೆ ಗಬ್ಬೂರು ಹೋಬಳಿಯ ಪ್ರಗತಿಪರ ಸಂಘಟನೆ ಒಕ್ಕೂಟದ ಸದಸ್ಯ ಮಲ್ಲಪ್ಪಗೌಡ ಮಾಲಿಪಾಟೀಲ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಅಧಿಕ ಗ್ರಾಮಗಳನ್ನು ಒಳಗೊಂಡಿರುವ ಗಬ್ಬೂರು ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡದೇ, ಶಾಸಕರ ಕ್ಷೇತ್ರವಾದ ಅರಕೇರಾ ಹೋಬಳಿಯನ್ನು ರಾಜಕೀಯ ಒತ್ತಡದಿಂದ ತಾಲ್ಲೂಕು ಕೇಂದ್ರ ಎಂದು ಆದೇಶಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ದೇವದುರ್ಗದಿಂದ ಅರಕೇರಾಕ್ಕೆ 15 ಕಿ.ಮೀ, ಅರಕೇರಾದಿಂದ ಸಿರವಾರ ತಾಲ್ಲೂಕಿಗೆ 15 ಕಿ.ಮೀ. ದೂರವಿದೆ. ದೇವದುರ್ಗದಿಂದ ಗಬ್ಬೂರು ಹೋಬಳಿ 30 ಕಿ.ಮೀ. ಅಂತರ ಇದೆ. ಗಬ್ಬೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಅರಕೇರಾ ಹೋಬಳಿಗೆ ತೆರಳಲು ತುಂಬಾ ತೊಂದರೆಯಾಗುತ್ತದೆ. ಅದಕ್ಕೆ ನೂತನ ತಾಲ್ಲೂಕು ಗಬ್ಬೂರು ಎಂದು ಘೋಷಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. 15 ದಿನಗಳಲ್ಲಿ ಅರಕೇರಾ ತಾಲ್ಲೂಕು ಕೇಂದ್ರ ಘೋಷಣೆ ಕೈ ಬಿಡಬೇಕು. ಇಲ್ಲದಿದ್ದರೆ ಗಬ್ಬೂರಿನಿಂದ ರಾಯಚೂರಿಗೆ ಪಾದಯಾತ್ರೆ ಮುಖಾಂತರ ಬಂದು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಬಂದಯ್ಯಸ್ವಾಮಿ ಹಿರೇಮಠ, ಚನ್ನಪ್ಪಗೌಡ ಕಾತರಕಿ, ರಾಮಣ್ಣ, ಶಾಂತಪ್ಪ, ಶಿವುಕುಮಾರ ಗಬ್ಬೂರು ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು