ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್‌ ಗ್ಯಾಲರಿಯಿಲ್ಲದೆ ಚಿತ್ರ ಕಲಾವಿದರ ಪರದಾಟ

Last Updated 7 ನವೆಂಬರ್ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಪ್ರೋತ್ಸಾಹಿಸಲು ವೇದಿಕೆಗಳನ್ನು ಒದಗಿಸಿದೆ. ಅದೇ ರೀತಿ ಚಿತ್ರ ಕಲಾವಿದರಿಗಾಗಿ ಒಂದು ಆರ್ಟ್‌ ಗ್ಯಾಲರಿ ನಿರ್ಮಿಸಿಲ್ಲ ಎನ್ನುವ ಅಳಲು ವ್ಯಕ್ತವಾಗುತ್ತಿದೆ.

ಜಿಲ್ಲೆಯಲ್ಲಿ ಹೆಸರಾಂತ ಚಿತ್ರ ಕಲಾವಿದರಿಂದ ಹಿಡಿದು ಚಿತ್ರಕಲಾ ಶಾಲಾ ಹಂತದವರೆಗೂ ಸಾಕಷ್ಟು ಚಿತ್ರ ಕಲಾಕೃತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದಾರೆ. ಆದರೆ, ಅವುಗಳನ್ನು ಜನರೆದುರು ಪ್ರದರ್ಶಿಸಿ ಪ್ರತಿಕ್ರಿಯೆ ಪಡೆಯುವುದಕ್ಕೆ ಕಲಾವಿದರಿಗೆ ಸಾಧ್ಯವಾಗುತ್ತಿಲ್ಲ. ಕಲಾ ಕೌಶಲ ತೆರೆದಿಡುವುದಕ್ಕೆ ವೇದಿಕೆಯಿಲ್ಲ ಎನ್ನುವ ನೋವು ಅವರಲ್ಲಿದೆ. ಆರ್ಟ್‌ ಗ್ಯಾಲರಿಯೊಂದನ್ನು ನಿರ್ಮಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕಲಾವಿದರು ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಸಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆದರೆ ಕೆಲಸ ಮಾಡುತ್ತಿಲ್ಲ. ಗ್ಯಾಲರಿ ನಿರ್ಮಾಣಕ್ಕಾಗಿ ಒಂದು ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಕಳುಹಿಸುತ್ತಿಲ್ಲ ಎನ್ನುವ ಅಳಲನ್ನು ಕಲಾವಿದರು ಹೇಳಿಕೊಳ್ಳುತ್ತಿದ್ದಾರೆ.

‘ರಾಯಚೂರಿನಲ್ಲಿ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಕನ್ನಡ ಭವನ ಸೇರಿದಂತೆ ಅನೇಕ ಸಭಾಂಗಣಗಳಿವೆ. ಎಲ್ಲಿಯೂ ಗೋಡೆಗೆ ಮೊಳೆ ಹೊಡೆದು, ಕಲಾಕೃತಿಯನ್ನು ನೇತುಹಾಕುವುದಕ್ಕೆ ಅವಕಾಶವಿಲ್ಲ. ಹೀಗಾದರೆ ಕಲಾವಿದರು ಪ್ರದರ್ಶನಗಳನ್ನು ಏರ್ಪಡಿಸುವುದಕ್ಕೆ ಹೇಗೆ ಸಾಧ್ಯವಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಆರ್ಟ್‌ ಗ್ಯಾಲರಿ ಸ್ಥಾಪಿಸಲಾಗಿದೆ. ಆದರೆ, ಈ ವಿಷಯದಲ್ಲಿ ರಾಯಚೂರು ಮಾತ್ರ ಹಿಂದುಳಿದಿದೆ’ ಎನ್ನುತ್ತಾರೆ ವ್ಯಂಗ್ಯಚಿತ್ರ ಕಲಾವಿದ ಈರಣ್ಣಾ ಬೆಂಗಾಲಿ.

‘ಇರುವ ರಂಗಮಂದಿರದ ಒಂದು ಭಾಗದಲ್ಲಿ ಆರ್ಟ್‌ ಗ್ಯಾಲರಿ ಅಭಿವೃದ್ಧಿಪಡಿಸಿದರೂ ಸಾಕು. ಪ್ರತ್ಯೇಕ ಆರ್ಟ್‌ ಗ್ಯಾಲರಿ ನಿರ್ಮಾಣ ಮಾಡಿದರೆ, ಚಿತ್ರಕಲೆಗೆ ಸಂಬಂಧಿಸಿದಂತೆ ವಿವಿಧ ಸ್ತರಗಳಲ್ಲಿ ತರಬೇತಿಗಳನ್ನು ಏರ್ಪಡಿಸಲು ಸಾಧ್ಯವಾಗುತ್ತದೆ’ ಎನ್ನುವುದು ಅವರ ಅಭಿಮತ.

ಚಿತ್ರಕಲಾವಿದ ಎಚ್‌.ಎಸ್‌. ಮ್ಯಾದರ ಅವರು ಹೇಳುವಂತೆ, ‘ರಾಯಚೂರಿನಲ್ಲಿ ಎರಡು ಪ್ರಮುಖ ಚಿತ್ರಕಲಾ ಶಾಲೆಗಳಿವೆ. ಅಲ್ಲಿಂದ ನೂರಾರು ಕಲಾವಿದರು ಹೊರಬಂದಿದ್ದಾರೆ. ಯುವ ಪ್ರತಿಭೆಗಳಿವೆ. ಇಂಥವರಿಗೆ ಕಲಾಕೃತಿ ಪ್ರದರ್ಶಿಸಲು ವ್ಯವಸ್ಥೆ ಇಲ್ಲ. ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕಲಾವಿದರು ಆಗಿ ಹೋಗಿದ್ದಾರೆ. ಇದೊಂದು ಜಿಲ್ಲಾ ಕೇಂದ್ರ ಆಗಿರುವುದರಿಂದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಪೋಷಿಸಿಕೊಂಡು ಹೋಗುವುದಕ್ಕೆ ಆರ್ಟ್‌ ಗ್ಯಾಲರಿ ಸ್ಥಾಪಿಸುವುದು ಅತ್ಯಂತ ಅವಶ್ಯಕವಾಗಿದೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT