ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯರ ಪಾಲಾಗುತ್ತಿವೆ ರಾಜ್ಯದ ಉದ್ಯೋಗ

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ವಿಶ್ಲೇಷಣೆ
Last Updated 11 ಜೂನ್ 2022, 15:30 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದ ಪ್ರತಿಷ್ಠಿತ ಕಂಪೆನಿಗಳಲ್ಲಿ ಶೇ 10 ರಷ್ಟು ಕೂಡಾ ಕನ್ನಡಿಗರಿಲ್ಲ. ಎಲ್ಲ ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ವಿಶ್ಲೇಷಿಸಿದರು.

ನಗರದ ಟ್ಯಾಗೋರ್‌ ಸಭಾಭವನದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಹಾಗೂ ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದಿಂದ ಶನಿವಾರ ಏರ್ಪಡಿಸಿದ್ದ ’ಸರೋಜಿನಿ ಮಹಿಷಿ ವರದಿ‘ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ರಾಜ್ಯದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 48 ಸಾವಿರ ಹುದ್ದೆಗಳು ಖಾಲಿ ಇವೆ. ಕೇಂದ್ರದ ರೈಲ್ವೆ, ಅಂಚೆ ಇಲಾಖೆ, ಎಲ್‌ಐಸಿ ಹಾಗೂ ಬ್ಯಾಂಕಿಂಗ್‌ನಲ್ಲಿ ಕನ್ನಡಿಗರಿಗೆ ಅವಕಾಶಗಳು ದೊರೆಯುತ್ತಿಲ್ಲ. ರಾಜ್ಯ ಸರ್ಕಾರದ ನೀತಿ ಬದಲಾಗದ ಹೊರತು ಉದ್ಯೋಗಾವಕಾಶ ಸಾಧ್ಯವಾಗುವುದಿಲ್ಲ ಎಂದರು.

ರಾಯಚೂರಿನಲ್ಲಿ ಇರುವ ವೈಟಿಪಿಎಸ್‌ನಲ್ಲಿ ಬಿಹಾರದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದ ರಾಜ್ಯದವರು ಕೇಂದ್ರ ಸರ್ಕಾರದಲ್ಲಿ ಹೆಚ್ಚಿನ ಪಾಲು ಹೊಂದಿರುವುದರಿಂದ ಅವರದ್ದೇ ಪ್ರಭಾವ ನಡೆಯುತ್ತಿದೆ ಎಂದು ಹೇಳಿದರು.

ಸಾಹಿತಿ ವೀರಹನುಮಾನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಗೋಪಾಲಕೃಷ್ಣ ಅಡಿಗರು, ಸಿದ್ದಯ್ಯ ಪುರಾಣಿಕ ಅವರಂಥ ಅತಿರಥ, ಮಹಾರಥರು ಈ ವರದಿಯಲ್ಲಿ ಭಾಗಿಯಾಗಿದ್ದರು. ಆದರೆ ಸರ್ಕಾರವು ಒಮ್ಮನಸ್ಸಿನಿಂದ ವರದಿ ಜಾರಿಗೆ ಮುಂದಾಗುತ್ತಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಅರುಣಾಕುಮಾರ್‌ ಟಿ. ಮಾತನಾಡಿ, ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಂಪೆನಿಗಳು ಸ್ಥಳೀಯರಿಗೆ ಉದ್ಗೋಗದ ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಇಚ್ಛಾಶಕ್ತಿ ಕೊರತೆಯಿಂದ ಈ ವರದಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಬಷಿರ ಅಹ್ಮದ್‌ ಹೊಸಮನಿ ಪ್ರಾಸ್ತಾವಿಕ ಮಾತನಾಡಿ, 1983 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಡಾ.ಸರೋಜಿನಿ ಮಹಿಷಿ ಸಮಿತಿ ರಚಿಸಿದ್ದರು. ಕನ್ನಡಿಗರಿಗೆ ಉದ್ಯೋಗ ದೊರಕಿಸುವಂತೆ ವರದಿ ಕೂಡಾ ಸಲ್ಲಿಕೆಯಾಗಿದೆ. ವರದಿಯು ಎರಡು ಬಾರಿ ಅಂಗೀಕಾರವಾಗಿದ್ದರೂ ಕನ್ನಡಿಗರಿಗೆ ನ್ಯಾಯ ಸಿಗುತ್ತಿಲ್ಲ ಎಂದರು.

ಪತ್ರಕರ್ತ ಡಿ.ಎಚ್‌.ಕಂಬಳಿ ಮಾತನಾಡಿದರು. ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಗೌರವ ಅಧ್ಯಕ್ಷ ಎಚ್‌.ಎಚ್‌.ಮ್ಯಾದಾರ ಸ್ವಾಗತಿಸಿದರು.

ಬಿ.ವಿಜಯೇಂದ್ರ ನಿರೂಪಿಸಿದರು. ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅ.ಮಲ್ಲಿಕಾರ್ಜುನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT