ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಕ್ರಮ ನೀರಾವರಿ ತಡೆಯದಿದ್ದರೆ ಹೋರಾಟ

ಟಿಎಲ್‌ಬಿಸಿ ಕಾಲುವೆ: ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ
Last Updated 24 ಜೂನ್ 2020, 14:06 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ಎಡದಂಡೆ ನಾಲೆಯಲ್ಲಿ ರಾಜಕೀಯ ಪ್ರಭಾವದಿಂದ ಮಾಡಿಕೊಂಡಿರುವ ಅಕ್ರಮ ನೀರಾವರಿಯನ್ನು ತಡೆಯದಿದ್ದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು ಎಂದು ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿಯ ಸಂಚಾಲಕ ರಾಘವೇಂದ್ರ ಕುಷ್ಠಗಿ ಎಚ್ಚರಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಸುಮಾರು 2.5 ಲಕ್ಷ ಎಕರೆ ಪ್ರದೇಶಕ್ಕೆ ಪ್ರಭಾವಿ ರೈತರು ಅಕ್ರಮ ನೀರಾವರಿ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಇವರಿಗೆ ರಾಜಕೀಯ ನಾಯಕರ ಬೆಂಬಲವಿದ್ದು, ತಡೆಯಬೇಕಿದ್ದ ಅಧಿಕಾರಿಗಳು ಹಣ ವಸೂಲಿ ಮಾಡಿಕೊಂಡು ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ತುಂಗಭದ್ರಾ ಎಡ ದಂಡೆ ನಾಲೆಯ 0 ಮೈಲಿನಿಂದ ಕೊನೆಯವರೆಗೆ ಎಲ್ಲೆಲ್ಲಿ ಅಕ್ವಡೆರ್‌ಗಳು, ನಾಲಾ ಹಳ್ಳ ಬಳಸಿಕೊಂಡು ಸಮಗ್ರ ಅಕ್ರಮ ನೀರಾವರಿ ಮಾಡಿಕೊಳ್ಳಲಾಗಿದೆ. ರಸ್ತೆಮೇಲೆ ಪಂಪ್ ಸೆಟ್, ಡೀಸೆಲ್ ಎಂಜಿನ್ ಮೂಲಕ ಮುಖ್ಯ ಕಾಲುವೆಯ ಬಲ ಭಾಗದಲ್ಲಿ ಕೆರೆ ತುಂಬಿಸಿಕೊಂಡು ಅಕ್ರಮ ನೀರು ಪಡೆಯುತ್ತಿದ್ದಾರೆ. ತುರ್ವಿಹಾಳ, ಕಾರಟಗಿ, ವಡರಹಟ್ಟಿ ವ್ಯಾಪ್ತಿಯ ಪ್ರಭಾವಿ ರೈತರು ಅಕ್ರಮದಿಂದ ಎರಡು ಬೆಳೆ ಬೆಳೆದರೆ ರಾಯಚೂರು ಹಾಗೂ ಮಾನ್ವಿ ತಾಲ್ಲೂಕಿನ ಕೆಳ ಭಾಗದ ರೈತರಿಗೆ ನೀರು ಸಿಗದೇ ಬೆಳೆ ಕೈಕೊಟ್ಟು ನಷ್ಟದ ಭೀತಿ ಎದುರಿಸುತ್ತಾರೆ ಎಂದರು.

ರೈತ ಮುಖಂಡ ಚಾಮರಸ ಮಾಲಿಪಾಟೀಲ, ಮಾಜಿ ಕಾಡಾ ಅಧ್ಯಕ್ಷ ಹಂಪಯ್ಯ ಸಾಹುಕಾರ, ವಿವಿಧ ರಾಜಕೀಯ ಪಕ್ಷದ ನಾಯಕರ ತಂಡದ ಸತ್ಯ ಶೋಧನಾ ಸಮಿತಿಯಿಂದ ಜೂನ್‌ 17 ರಂದು ಪರಿಶೀಲನೆ ಮಾಡಿದಾಗ ಅಕ್ರಮವೆಲ್ಲಾ ಬಯಲಾಗಿದೆ. ಈ ಕುರಿತು ದೃಶ್ಯ ಸಮೇತ ದಾಖಲಿಸಿದ್ದೇವೆ. ಅಕ್ರಮ ನೀರಾವರಿಗೆ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಮುಖಂಡ ಶಿವರಾಜ ತಂಗಡಿ ಕೆಲ ರಾಜಕೀಯ ನಾಯಕರು ಕಿಂಗ್ ಪಿನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಕ್ರಮ ನೀರಾವರಿಯ ಫಲಾನುಭವಿಗಳಿಂದ ಎಕರೆಗೆ 5 ರಿಂದ 7 ಚೀಲದಂತೆ ಬೆಳೆ ಪಡೆದು ವಸೂಲಿಯ ದಂಧೆ ನಡೆಸುತ್ತಿದ್ದಾರೆ. ಇದಕ್ಕೆ ನೀರಾವರಿಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಅಕ್ರಮ ನೀರಾವರಿ ತಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಆದೇಶ ನೀಡಿದರೂ ಕೂಡ ಅಕ್ರಮ ನಿಂತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಗಮನಕ್ಕೆ ತರಲಾಗಿದೆ. ನೀರಾವರಿ ಸಚಿವ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ತಂಡದಿಂದ ಸಭೆ ಕರೆದು ಅಕ್ರಮಕ್ಕೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಸತ್ಯಶೋಧನಾ ಸಮಿತಿಯಿಂದ ಪಂಪ್ ಸೆಟ್ ಕಿತ್ತುವ ಮೂಲಕ ಪಕ್ಷಾತೀತವಾಗಿ ಸಂಘಟನಾತ್ಮಕ ಹೋರಾಟ ಮಾಡಲಾಗುವುದು ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ಮೇಲ್ಭಾಗದ ಪ್ರಭಾವಿ ರೈತರ ಅಕ್ರಮ ನೀರಾವರಿಯಿಂದ ಸಿರವಾರ, ಮಾನ್ವಿ, ರಾಯಚೂರು ತಾಲ್ಲೂಕಿನ ರೈತರಿಗೆ ನೀರು ಸಿಗುತ್ತಿಲ್ಲ. ಕೆಳ ಭಾಗದ ರೈತರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಅಧಿಕಾರಿಗಳ ಜೊತೆ ಸಭೆ ಕರೆಯಬೇಕು. ನಿರಂತರ ಹೋರಾಟ ಮಾಡಲಾಗುವುದು ಜೈಲಿಗೆ ಹೋಗಲೂ ತಯಾರಾಗಿದ್ದೇವೆ ಎಂದು ಹೇಳಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿರುಪಾಕ್ಷಿ, ಸಮಿತಿಯ ಮುಖಂಡರಾದ ಬಸವನಗೌಡ ಬ್ಯಾಗವಾಟ್, ತ್ರಿವಿಕ್ರಮ ಜೋಷಿ, ಹರವೀ ನಾಗನಗೌಡ, ಆನಂದರಾವ್, ಸಾವಿತ್ರಿ ಪುಷೋತ್ತಮ, ಜಾನ್ ವೆಸ್ಲಿ, ಖಾಜಾ ಅಸ್ಲಂ ಪಾಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT