ಶುಕ್ರವಾರ, ನವೆಂಬರ್ 22, 2019
22 °C

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಒತ್ತಾಯ

Published:
Updated:
Prajavani

ರಾಯಚೂರು: ಬರಹಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಜನಪರ ಸಂಘಟನೆಗಳ ನೇತೃತ್ವದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸರ್ಕಾರಗಳು ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದ್ದು, ಹೋರಾಟಗಾರು, ಲೇಖಕರನ್ನು ಬಂಧನದಲ್ಲಿ ಇರಿಸುವ ಹುನ್ನಾರ ನಡೆಸುತ್ತಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕೇಸರಿಕರಣ ಮಾಡುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಸಿವೆ. ಕೋಮುವಾದಿ ದಾಳಿಯನ್ನು ಪ್ರಶ್ನಿಸುವ ಅಸಂಖ್ಯಾತ ವಿಚಾರವಾದಿ, ಬರಹಗಾರರನ್ನು ಬಂಧಿಸಲಾಗುತ್ತಿದೆ. ಗೌರಿ ಲಂಕೇಶ ಟ್ರಸ್ಟ್‌ನ ಕಾರ್ಯದರ್ಶಿ, ಸ್ವರಾಜ್ಯ ಇಂಡಿಯಾದ ರಾಜ್ಯ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ನಗರದಲ್ಲಿ ಪೊಲೀಸರು ಬಂಧಿಸಿರುವುದು ಖಂಡನೀಯ ಎಂದರು.

25 ವರ್ಷಗಳ ಹಿಂದೆ ರಾಯಚೂರಿನಲ್ಲಿ ವಿನೋದ ಎನ್ನುವವರ ವಿರುದ್ಧ ಹೂಡಲಾಗಿದ್ದ ನಾಲ್ಕು ಪ್ರಕರಣಗಳನ್ನು ನರಸಿಂಹಮೂರ್ತಿ ಅವರ ಮೇಲೆ ಹೇರಲಾಗಿದೆ. ಅಂದಿನ ವಿನೋದನೇ ಇಂದಿನ ನರಸಿಂಹಮೂರ್ತಿ ಎಂಬು ಸುಳ್ಳು ಸಾಕ್ಷಿಯನ್ನು ಪೊಲೀಸರು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಜನಪರ ಚಳವಳಿಯಲ್ಲಿ ನಿರಂತರವಾಗಿ ಜನಸಂಕರ್ಪದಲ್ಲಿಯೇ ಇದ್ದುಕೊಂಡು ಹೋರಾಟ, ಬರಹ ಹಾಗೂ ಪತ್ರಿಕೆಯನ್ನು ನರಸಿಂಹಮೂರ್ತಿ ನಡೆಸುತ್ತಿದ್ದಾರೆ. ಎಲ್ಲಿಯೂ ತಲೆಮರೆಸಿಕೊಂಡಿಲ್ಲ. ರಾಜ್ಯ ಸರ್ಕಾರವು ದೂರ್ತ ರಾಜಕಾರಣ ಮಾಡಿ ಅವರನ್ನು ಬಂಧಿಸಿದ್ದು ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಮುಖಂಡರಾದ ಆರ್.ಮಾನಸಯ್ಯ, ಚಾಮರಸ ಮಾಲಿಪಾಟೀಲ, ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ಹನುಮಂತಪ್ಪ ಕಾಕರಗಲ್, ಕುಮಾರ ಸಮತಳ, ದೊಡ್ಡ ಬಸನಗೌಡ, ಯಂಕಪ್ಪ ಕಾರಬಾರಿ, ಜೆ.ಬಿ.ರಾಜು, ರವಿ ದಾದಸ್ ಇದ್ದರು.

ಪ್ರತಿಕ್ರಿಯಿಸಿ (+)