ಅವಕಾಶ ಬಳಸಿ ಸ್ವಯಂ ಉದ್ಯೋಗ ಸ್ಥಾಪಿಸಿ: ವೈ. ಎಂ. ಮೊಹಮ್ಮದ್ ಯುಸುಫ್‌ ಸಲಹೆ

7

ಅವಕಾಶ ಬಳಸಿ ಸ್ವಯಂ ಉದ್ಯೋಗ ಸ್ಥಾಪಿಸಿ: ವೈ. ಎಂ. ಮೊಹಮ್ಮದ್ ಯುಸುಫ್‌ ಸಲಹೆ

Published:
Updated:
Deccan Herald

ರಾಯಚೂರು: ಕೌಶಲ ಬೆಳೆಸಿಕೊಂಡು ಲಭ್ಯವಿರುವ ಅವಕಾಶ ಬಳಸಿಕೊಂಡು ಸ್ವಯಂ ಉದ್ಯೋಗ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವೈ. ಎಂ. ಮೊಹಮ್ಮದ್ ಯುಸುಫ್ ಅವರು ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಎಸ್.ಎಸ್.ಆರ್.ಜಿ. ಮಹಿಳಾ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ(ಯು.ಎನ್.ಡಿ.ಪಿ), ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್), ಎಸ್.ಎಸ್.ಆರ್.ಜಿ. ಮಹಿಳಾ ಕಾಲೇಜಿನಿಂದ ಗುರುವಾರ ಏರ್ಪಡಿಸಿದ್ದ ‘ದಿಶಾ-ಐಇಸಿ - ಔಟ್‌ರೀಚ್’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೃತ್ತಿ ಕೌಶಲದಲ್ಲಿ ದೇಶವು ಶತ ಶತಮಾನದ ಇತಿಹಾಸ ಹೊಂದಿದೆ. ನಮ್ಮ ದೇಶದಲ್ಲಿರುವ ಪ್ರತಿಭಾವಂತ ಉದ್ಯಮಶೀಲರು ಬೇರೆ ಯಾವ ದೇಶಗಳಿಗೆ ಹೋಗಿ ಬೃಹತ್ ಉದ್ಯಮಗಳನ್ನು ಸ್ಥಾಪಿಸಿ ಉದ್ಯಮ ಕ್ಷೇತ್ರದಲ್ಲಿ ಪ್ರಭುತ್ವವನ್ನು ಸಾಧಿಸಿದ್ದಾರೆ ಎಂದರು.

‘ದೇಶದ ಅಭಿವೃದ್ಧಿಗೆ ನಾವೇ ಕಾರಣೀಭೂತರಾಗಬೇಕಿದೆ. ರಾಷ್ರದ ಅಭಿವೃದ್ಧಿಗೆ ಉದ್ಯಮಗಳ ಪಾತ್ರ ಬಹು ಮುಖ್ಯವಾಗಿದೆ. ಉದ್ದಿಮೆಗಳ ಸ್ಥಾಪನೆಗೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಿಕೊಂಡು ಸಣ್ಣ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಪ್ರಾರಂಭಿಸಿ ಬೃಹತ್ತಾಗಿ ಬೆಳೆಯಲು ತರಬೇತಿಯು ಅವಶ್ಯಕ’ ಎಂದು ಹೇಳಿದರು.

80 ರ ದಶಕದಿಂದಿಚೆಗೆ ವೃತ್ತಿ ಕೌಶಲ ಮತ್ತು ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಮತ್ತು ಇತರೆ ಸೌಲಭ್ಯಗಳ ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಪದವಿ ನಂತರದಲ್ಲಿ ಏನು ಮಾಡಬೇಕೆಂಬುದನ್ನು ವಿದ್ಯಾರ್ಥಿ ದಿಶೆಯಿಂದಲೇ ಯೋಜನೆಯನ್ನು ರೂಪಿಸಿಕೊಂಡು ಮುಂದೆ ಸ್ವಯಂ ಉದ್ಯೋಗಗಳನ್ನು ಸ್ಥಾಪಿಸಬೇಕು. ಉದ್ಯೋಗ ಸೃಷ್ಠಿಸಿ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ. ಮೊಹಮ್ಮ್ಮದ್ ಇರ್ಫಾನ್, ಯಾವುದೇ ಉದ್ಯೋಗಕ್ಕೆ ವೃತ್ತಿ ಕೌಶಲದ ಅವಶ್ಯಕತೆ ಇರುತ್ತದೆ. ವೃತ್ತಿ ಕೌಶಲ ಹೊಂದಿದ ಮಾನವ ಶಕ್ತಿಯ ಕೊರತೆ ಬಹಳಷ್ಟಿದೆ. ಈ ಕೊರತೆಯನ್ನು ನೀಗಿಸಲು ಕೌಶಲ್ಯ ಕರ್ನಾಟಕ ಮುಖಾಂತರ ವೃತ್ತಿ ಕೌಶಲ್ಯತೆಯನ್ನು ಬೆಳೆಸಲು ಯೋಜಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜವಳಿ ಉದ್ದಿಮೆದಾರರಿಗೆ ಶೇ 75 ರಷ್ಟು ಸಹಾಯಧನ ನೀಡಲಾಗುತ್ತಿದೆ. ಉದ್ಯಮ ಕ್ಷೇತ್ರದಲ್ಲಿಯೂ ಮಹಿಳೆಯರು ಗಮನಾರ್ಹವಾದ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯಮಶೀತೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಭಾವಿ ಉದ್ಯಮಶೀಲರಿಗೆ ಜಾಗೃತಿ ಮೂಡಿಸುವ ಕುರಿತು ಜಿಲ್ಲಾ ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಎಸ್.ಎಸ್.ಆರ್.ಜಿ. ಮಹಿಳಾ ಕಾಲೇಜಿನ ಪ್ರಾಚಾರ್ಯೆ ಗೀತಾ ಬಡಿಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಸತ್ಯನಾರಾಯಣ, ರಾಷ್ಟ್ರೀಯ ತರಬೇತುದಾರ ಬಸವರಾಜ ಇದ್ದರು.

ಸಮಾರಂಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ತ್ರಿವೇಣಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಈರಮ್ಮ ಜೆ. ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಮಹಾದೇವಮ್ಮ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !