ಮಂಗಳವಾರ, ಜನವರಿ 18, 2022
15 °C

ವೈಕುಂಠ ಏಕಾದಶಿ: ವೆಂಕಟೇಶ್ವರ ದರ್ಶನ ಪಡೆದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ವೈಕುಂಠ ಏಕಾದಶಿ ನಿಮಿತ್ತ ಜಿಲ್ಲೆಯಾದ್ಯಂತ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು. ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಪುನೀತರಾದರು.

ರಾಯಚೂರು ನವೋದಯ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ವಿಶೇಷ ಪುಷ್ಪಾಲಂಕೃತ ಮಾಡಲಾಗಿತ್ತು. ವೈಕುಂಠ ಏಕಾದಶಿಯಂದು ಭಕ್ತರು ಸರದಿಯಲ್ಲಿ ದರ್ಶನ ಪಡೆಯುವುದಕ್ಕಾಗಿ ವ್ಯವಸ್ಥೆ ಇತ್ತು. ದೇವಸ್ಥಾನ ಮತ್ತು ದೇವಸ್ಥಾನದ ಆವರಣವು ಹಸಿರು ತೋರಣಗಳು ಹಾಗೂ ವರ್ಣವೈವಿಧ್ಯದಿಂದ ಕೂಡಿದ ಹೂವಿನ ಅಲಂಕಾರವು ಚಿತ್ತಾಕರ್ಷಕವಾಗಿತ್ತು. ತಿರುಮಲ ತಿರುಪತಿಯ ದೇವಸ್ಥಾನದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳ ರೀತಿಯಲ್ಲೇ ದೇವರಿಗೆ ಪೂಜೆ ನೆರವೇರಿಸಲಾಯಿತು.

ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ, ಸ್ವಾತಿ ರೆಡ್ಡಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು.

ಉಪ್ಪಾರವಾಡಿ ಬಡಾವಣೆಯ ವೆಂಕಟೇಶ್ವರದೇವಸ್ಥಾನ, ನೀಲಕಂಠೇಶ್ವರ ಬಡಾವಣೆಯಲ್ಲಿ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಆಶಾಪೂರ ಮಾರ್ಗದಲ್ಲಿರುವ ರಾಜಮಾತಾ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು. ವಿಶೇಷವಾಗಿ ಅಲಂಕರಿಸಿದ್ದ ವೆಂಕಟೇಶ್ವರ ಮತ್ತು ಶ್ರೀದೇವಿಯನ್ನು ನೋಡಿ ಭಕ್ತರು ಧನ್ಯತೆ ಅನುಭವಿಸಿದರು.

ದೇವಸ್ಥಾನಗಳಲ್ಲಿ ವಿದ್ಯುತ್‌ ದೀಪಾಲಂಕಾರವು, ಎಣ್ಣೆ ದೀಪದ ಅಲಂಕಾರವು,ವಿಶಾಲವಾಗಿ ಬಿಡಿಸಿದ್ದ ರಂಗೋಲಿ ಹಾಗೂ ಹೂವಿನ ಅಲಂಕಾರವು ಭಕ್ತಭಾವ ಹೆಚ್ಚಿಸಿದವು.

ವೈಕುಂಠ ಏಕಾದಶಿಯು ಮಹತ್ವದ ದಿನವಾಗಿದ್ದರಿಂದ ಭಕ್ತರು ಉಪವಾಸ ಆಚರಿಸುವ ಸಂಪ್ರದಾಯ ಪಾಲನೆ ಮಾಡಿದರು. ಮಹಾಮಾರಿ ಕೋವಿಡ್‌ ಇರುವುದರಿಂದ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸ್ಯಾನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬ ಭಕ್ತರು ಮಾಸ್ಕ್ ಧರಿಸಿಕೊಂಡು ಹಾಗೂ ಅಂತರ ಕಾಪಾಡಿಕೊಂಡು ಬರಲು ಭಕ್ತರಿಗೆ ದೇವಸ್ಥಾನದ ಸಮಿತಿಯಿಂದ ಮನವಿ ಮಾಡಲಾಗಿತ್ತು. ಹೀಗಾಗಿ ಎಲ್ಲರೂ ಮಾಸ್ಕ್ ಧರಿಸಿದ್ದರು.

ಗಾಜಗಾರಪೇಟೆಯ ಬಡಾವಣೆಯಲ್ಲಿರುವ ಶ್ರೀನಗರೇಶ್ವರ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು. ವೈಕುಂಠ ಏಕಾದಶಿ ದಿನದಂದು ವೈಕುಂಠದಲ್ಲಿ ಬಾಗಿಲು ತೆರೆದಿರುತ್ತದೆ. ಹೀಗಾಗಿ ಈ ದಿನದಂದು ವೆಂಕಟೇಶ್ವರ ವಿಶೇಷವಾಗಿ ಭಕ್ತರಿಗೆ ನೇರವಾಗಿ ದರ್ಶನ ಕರುಣಿಸುತ್ತಾನೆ ಎನ್ನುವುದು ನಂಬಿಕೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.