ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಿಂದ ವಳಬಳ್ಳಾರಿ ಮಠದ ಜಾತ್ರೋತ್ಸವ

ಸ್ವಾಗತ ಸಮಿತಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿಕೆ
Last Updated 19 ಜನವರಿ 2023, 6:20 IST
ಅಕ್ಷರ ಗಾತ್ರ

ಸಿಂಧನೂರು: ಜ.25ರಿಂದ 28ರವರೆಗೆ ತಾಲ್ಲೂಕಿನ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ 40ನೇ ವರ್ಷದ ಜಾತ್ರೋತ್ಸವ, ಸಿದ್ದಲಿಂಗ ಸ್ವಾಮೀಜಿ ಅವರ ಅಮೃತ ಮಹೋತ್ಸವ, ನೂತನ ಶಿಲಾಮಂಟಪ ಮಂಟಪ ಉದ್ಘಾಟನೆ, ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಕಾರ್ಯಕ್ರಮ ನಾಲ್ಕು ದಿನ ನಡೆಯಲಿದ್ದು, 25ರಂದು ಸಂಜೆ 6 ಗಂಟೆಗೆ ಪುರಾಣ ಮಂಗಲದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

26 ರಂದು ಸದಾಶಿವದೇವರು ಹಾಗೂ ನಾಗಭೂಷಣ ದೇವರ ಪಟ್ಟಾಧಿಕಾರ, 10 ಗಂಟೆಗೆ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಂಜೆ 6ಕ್ಕೆ ಸರ್ವಧರ್ಮ ಭಾವೈಕ್ಯ ಸಮಾವೇಶ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಂಥ ಲೋಕಾರ್ಪಣೆ ಮಾಡುವರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ.ಇಬ್ರಾಹಿಂ ಪಾಲ್ಗೊಳ್ಳುವರು. 27ರಂದು ಬೆಳಿಗ್ಗೆ 11 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಜರುಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಶಿಲಾ ಮಂಟಪ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳುವರು. ಸಂಜೆ 5 ಗಂಟೆಗೆ ಹೂವಿನ ಮಹಾರಥೋತ್ಸವ ನಡೆಯಲಿದೆ. ಮಹಿಳಾ ಗೋಷ್ಠಿಯಲ್ಲಿ ಡಾ.ಸುಧಾಮೂರ್ತಿ, ಮೀನಾಕ್ಷಿ ಖಂಡಿಮಠ, ಲೀಲಾ ಮಲ್ಲಿಕಾರ್ಜುನ ಕಾರಟಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

28 ರಂದು ಬೆಳಿಗ್ಗೆ 11 ಗಂಟೆಗೆ ಕೃಷಿ ಗೋಷ್ಠಿ ನಡೆಯಲಿದ್ದು, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ರಾಯಚೂರು ಕೃಷಿ ವಿವಿ ಕುಲಪತಿ ಹನುಮಂತಪ್ಪ, ಮಾಜಿ ಉಪಕುಲಪತಿ ಬಿ.ವಿ.ಪಾಟೀಲ್ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ತ್ರಿವಿಧ ದಾಸೋಹಿ ಸಿದ್ದಲಿಂಗ ಸ್ವಾಮೀಜಿ ಅವರ ಅಮೃತ ಮಹೋತ್ಸವ, ರಜತ ತುಲಾಭಾರ ಕಾರ್ಯಕ್ರಮ ಜರುಗಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿದ್ದ ಸುವರ್ಣಗಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಗುರುಮುಟ್ಟಿ ಗುರುವಾದವರು ಗ್ರಂಥ ಲೋಕಾರ್ಪಣೆ ಮಾಡುವರು. ಜೊತೆಗೆ ರಾತ್ರಿ ಸಂಗೀತ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

‘ನೂರು ಎಕರೆ ಜಾಗದಲ್ಲಿ ಅಚ್ಚುಕಟ್ಟಾಗಿ ಜಾತ್ರೋತ್ಸವ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 3 ಎಕರೆ ಜಾಗದಲ್ಲಿ ವೇದಿಕೆ, 6 ಎಕರೆ ಜಾಗದಲ್ಲಿ ಪ್ರಸಾದ ವ್ಯವಸ್ಥೆ, ಲಡ್ಡು, ಜೋಳದ ರೊಟ್ಟಿ, ಕಾಯಿಪಲ್ಯ, ಅನ್ನ ಸಾಂಬರ್ ತಯಾರಿಸುವಿಕೆ ಅಲಬನೂರು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಅಲಬನೂರು, ಗೊರೇಬಾಳ ಹಾಗೂ ರೆಡ್ಡಿ ಸಮಾಜ ತಲಾ ಒಂದು ದಿನ ಅಡುಗೆ ತಯಾರಿಸಲು ದೇಣಿಗೆ ನೀಡಿದ್ದಾರೆ. 5 ಲಕ್ಷ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಉಪಸಮಿತಿ ಮಾಡುತ್ತಿದೆ. ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಬಾದರ್ಲಿ, ವಳಬಳ್ಳಾರಿ, ಹೆಡಗಿನಾಳ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿ ನಿರ್ವಹಣೆ ಮಾಡುವರು. ಡಿವೈಎಸ್‍ಪಿ ನೇತೃತ್ವದಲ್ಲಿ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಫಾರ್ಕಿಂಗ್ ವ್ಯವಸ್ಥೆ ಮಾಡಲಿದ್ದಾರೆ. ಗಿಣಿವಾರ-ವಳಬಳ್ಳಾರಿ ಮಧ್ಯದ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಂದ ಬಸ್‍ಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಮುರ್ತುಜಾ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT