ಗುರುವಾರ , ಸೆಪ್ಟೆಂಬರ್ 23, 2021
24 °C

ಸಂಸ್ಕಾರಕ್ಕಾಗಿ ವೇದ ಅಧ್ಯಯನ ಶಿಬಿರ: ಸದಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಬೇಡ ಜಂಗಮ ಸಮಾಜದಿಂದ ಒಂದು ತಿಂಗಳು ವೇದ ಅಧ್ಯಯನ ಶಿಬಿರ ಏರ್ಪಡಿಸಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಗುಡುಗುಂಟಿ ಮರಿಸ್ವಾಮಿ ಮಠದ ಸದಾನಂದ ಸ್ವಾಮೀಜಿ ಹೇಳಿದರು.

ನಗರ ಆಫೀಸರ್ಸ್‌ ಕಾಲೋನಿಯ ಮರಿಸ್ವಾಮಿ ಮಠದಲ್ಲಿ ಈಚೆಗೆ ಆರಂಭವಾದ ಶಿಬಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ದೇಶ ಹಲವಾರು ಸಾಂಸ್ಕೃತಿಕ ಸಂಪ್ರದಾಯಗಳ ಮಹಾನ್ ಭೂಮಿಯಾಗಿದೆ. ಇಂತಹ ಪುಣ್ಯಭೂಮಿಯಲ್ಲಿಜನಿಸಿದ್ದೇ ಪೂರ್ವಜನ್ಮದ ಪುಣ್ಯವೆಂದರೂ ತಪ್ಪಾಗುವುದಿಲ್ಲ ಎಂದರು.

ಈ ಶಿಬಿರದಲ್ಲಿ 114 ಜನ ಜಂಗಮ ವಟುಗಳು ಅಬ್ಯಾಸ ಮಾಡುತ್ತಿರುವುದು ವಿಶೇಷವಾಗಿದೆ. ದಿನನಿತ್ಯವೂ ಎಲ್ಲರಿಗೂ ಉಚಿತವಾಗಿ ಊಟ ವಸತಿ ನೀಡುತ್ತಿರುವುದು ಬಹುದೊಡ್ಡ ಕೆಲಸ. ಇಲ್ಲಿ ಪೂಜಾಸಂಸ್ಕಾರಗಳನ್ನು ಕಲಿತು ಮಕ್ಕಳು ತಮ್ಮ ಜೀವನದಲ್ಲಿ ಸಂಸ್ಕಾರ ಸಂಪ್ರದಾಯಗಳಿಂದ ಬೆಳೆಯಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಜನನದಿಂದ ಮರಣದವರೆಗೆ ಬರುವಂತಹ ಎಲ್ಲಾ ತರಹದ ಪೂಜಾ ಕಾರ್ಯಕ್ರಮಗಳಲ್ಲಿ ಈ ಶಿಬಿರದಿಂದ ಕಲಿಯವರು ತಮ್ಮನ್ನು ತಾವು ರೂಢಿಸಿಕೊಳ್ಳಬೇಕು. ತನ್ನದೇ ಆದ ಸಂಸಾರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಸಮಾಜದಲ್ಲಿ ಒಳ್ಳೇಯ ಪುರೋಹಿತ ಅಥವಾ ಶಾಸ್ತ್ರಿಗಳಾಗಿ ಜೀವನ ನಡೆಸುವದಕ್ಕೆ ಈ ಒಂದು ಶಿಬಿರ ನೆರವಾಗಲಿದೆ ಎಂದು ಹೇಳಿದರು.

ಈ ಶಿಬಿರದಲ್ಲಿ ವಟುಗಳಿಗೆ ಪ್ರಸಾದದ ವ್ಯವಸ್ಥೆಯ ಸೇವೆಯನ್ನು ಸಲ್ಲಿಸಲು ಆಸಕ್ತಿ ಇರುವವರು ಮುಂದೆ ಬರಬಹುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಿಸಿ ಜಗದ್ಗುರು ಪಂಚಾಚಾರ್ಯರ, ಬಸವಾದಿ ಶಿವಶರಣರ, ಗುರುಕುಮಾರ ಪಚಾಕ್ಷರಿ ಪುಟ್ಟರಾಜರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.

ಶಿಬಿರವನ್ನು ಸದಾನಂದ ಶಿವಾಚಾರ್ಯರು, ಶಾಂತಮಲ್ಲ ಶಿವಾಚಾರ್ಯರು ಹಾಗೂ ಅಭಿನವ ರಾಚೋಟಿ ವೀರ ಶಿವಾಚಾರ್ಯರ ದಿವ್ಯ ಆಶೀರ್ವಾದದೊಂದಿಗೆ ತಾಲ್ಲೂಕಾ ಬೇಡ ಜಂಗಮ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ ವೈದಿಕ ಶಿವಪೂಜಾ ವಿಧಿ, ಮಂತ್ರ ಪಠಣ, ರುದ್ರಾಭಿಷೇಕ, ಪಂಚಾಭಿಷೇಕ ಮಂತ್ರಗಳು, ಲಿಂಗಾಷ್ಠಕ ಮಂತ್ರ, ಸಹಸ್ರ ನಾಮಾವಳಿ ಮಂತ್ರ, ಇಷ್ಠಲಿಂಗ ಪೂಜಾ ವಿದಾನ, ವೀರಶೈವ ಧರ್ಮದ ಆಚಾರ ವಿಚಾರ ಸಂಸ್ಕಾರ ಪದ್ಧತಿಗಳು ಹಾಗೂ ಇನ್ನಿತರ ಪೂಜಾ ಸಂಸ್ಕಾರ ಪದ್ಧತಿಗಳ ಅಧ್ಯಯನವನ್ನು ಉಪನ್ಯಾಸದ ಮೂಲಕ ತಿಳಿಸಿಕೊಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.