ರಾಯಚೂರಿನಲ್ಲಿ ಪಶುಪಾಲನಾ ಇಲಾಖೆಯ ವಿಭಾಗೀಯ ಕಚೇರಿ

7
ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿಕೆ

ರಾಯಚೂರಿನಲ್ಲಿ ಪಶುಪಾಲನಾ ಇಲಾಖೆಯ ವಿಭಾಗೀಯ ಕಚೇರಿ

Published:
Updated:
Deccan Herald

ರಾಯಚೂರು: ಈ ಭಾಗದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿಭಾಗೀಯ ಕಚೇರಿ ಇರಲಿಲ್ಲ. ಇದೀಗ ವಿಭಾಗೀಯ ಕಚೇರಿಯ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೆ ಅದು ರಾಯಚೂರಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಬುಧವಾರ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ರೈತರು ದೇಶದ ಬೆನ್ನೆಲುಬು ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಅದೇ ಬೆನ್ನೆಲುಬು ಮುರಿದುಹೋಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಸಮ್ಮಿಶ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಈಗಾಗಲೇ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಗಾಗಿ ಸರ್ಕಾರವು ‘ಹಸಿರು ಕರ್ನಾಟಕ’ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿಯೊಂದು ಮಗುವಿಗೆ ಒಂದು ಗಿಡ ಎಂಬ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದರು.

ಪರಿಸರ ಸಂಕ್ಷರಣೆಗೆ ಎಲ್ಲರೂ ಒತ್ತು ನೀಡಬೇಕಿದೆ. ಪರಿಸರವನ್ನು ಮನುಷ್ಯ ನಾಶ ಮಾಡಿದರೆ; ಪರಿಸರವು ಮನುಷ್ಯನನ್ನು ನಾಶ ಮಾಡುತ್ತದೆ ಎಂಬುದನ್ನು ನೆನಪಿಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಸಮುದ್ರ ಮೀನುಗಾರಿಕೆಗೆ ಇಲ್ಲಿಯವರೆಗೂ ಒತ್ತು ನೀಡುತ್ತಾ ಬರಲಾಗಿದೆ. ಆದರೆ, ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಳನಾಡು ಮೀನುಗಾರಿಕೆ ತುಂಬಾ ಲಾಭದಾಯಕವಾಗಿ ನಡೆಯುತ್ತಿದೆ. ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ₨ 70 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಭಾಗದ ರೈತರಿಗೆ ನೀರು ತಲುಪುವ ನಿಟ್ಟಿನಲ್ಲಿ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಸಮಾಜವು ಯುವ ಸಮುದಾಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಇದ್ದರೆ, ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರಕಿಲ್ಲ. ದೇಶದ ಅನೇಕ ಹೋರಾಟಗಾರರು, ತ್ಯಾಗ, ಬಲಿದಾನ ನೀಡಿದ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಿದರು.

ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ₨49 ಸಾವಿರ ಕೋಟಿ ಸಾಲಮನ್ನಾ ಮಾಡಿದೆ. ರೈತರಿಗೆ ಋಣಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ರೈತರ ಸಾಲಮನ್ನಾ ಶಾಶ್ವತ ಪರಿಹಾರವಲ್ಲ ಎಂದು ತಿಳಿಸಿದರು.

ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಶೂನ್ಯ ಬಂಡವಾಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಲಹೆಯನ್ನು ಸರ್ಕಾರ ಪಡೆಯುತ್ತಿದೆ. ಇಸ್ರೆಲ್ ಮಾದರಿಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸರು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಮತ್ತು ವಿವಿಧ ಶಾಲೆಗಳ ಮಕ್ಕಳು ನಡೆಸಿದ ಕವಾಯತು ಆಕರ್ಷಕವಾಗಿತ್ತು. ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು.

ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !