ಗುರುವಾರ , ನವೆಂಬರ್ 21, 2019
26 °C

ವಿಮೋಚನಾ ಹೋರಾಟಕ್ಕೆ ಪ್ರೇರಣೆಯಾಗಿದ್ದ ರಾಯಚೂರು

Published:
Updated:
Prajavani

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕೊನೆಭಾಗಕ್ಕೆ ನೀರು ತಲುಪಿಸುವ ಕಾರ್ಯದಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ ಬರ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಕಾಮಗಾರಿಗಳಾಗುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ರ‍್ಯಾಲಿ ನಡೆಸಿದರು.

ಹೈದರಾಬಾದ್‌ ಪ್ರಾಂತದ ಭಾಗವಾಗಿದ್ದ ಕರ್ನಾಟಕ ಜಿಲ್ಲೆಗಳು 1948 ಸೆಪ್ಟೆಂಬರ್‌ 17 ರಂದು ಎಲ್ಲರ ಪರಿಶ್ರಮದ ಫಲವಾಗಿ ಭಾರತ ಒಕ್ಕೂಟದೊಂದಿಗೆ ವಿಲೀನವಾಯಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿವರ್ಷ ಸೆಪ್ಟೆಂಬರ್‌ 17 ರಂದು ವಿಮೋಚನಾ ದಿನಾಚರಣೆ ಹೆಸರಿನಲ್ಲಿ ವಿಮೋಚನಾ ಹೋರಾಟಗಾರರನ್ನು ನೆನಪಿಸಿಕೊಳ್ಳಲಾಗುತ್ತಿತ್ತು. ಈ ವರ್ಷದಿಂದ ‘ಕಲ್ಯಾಣ ಕರ್ನಾಟಕ ಉತ್ಸವ’ ಆಚರಣೆಯೊಂದಿಗೆ ಹೋರಾಟವನ್ನು ಸ್ಮರಿಸುವುದಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.

ಹೋರಾಟದ ಕಿಡಿ: ಭಾರತ ಒಕ್ಕೂಟ ವ್ಯವಸ್ಥೆಗೆ ಒಳಪಡಲು ಹೈದರಾಬಾದ್‌ ಅರಸ ನವಾಬ ನಿರಾಕರಿಸಿದ್ದರಿಂದ, ಸ್ವಾತಂತ್ರ್ಯೋತ್ಸವ ಪೂರ್ವದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ‘ನಿಜಾಮರೇ ಭಾರತ ಒಕ್ಕೂಟಕ್ಕೆ ಸೇರಿರಿ’ ಎನ್ನುವ ಘೋಷಣೆಯೊಂದಿಗೆ ಆಗಸ್ಟ್‌ 7, 1947 ರಿಂದಲೇ ರಾಯಚೂರಿನಲ್ಲಿ ಸತ್ಯಾಗ್ರಹ ಆರಂಭಿಸಲಾಯಿತು.

ರಾ.ಘು. ಜೋಶಿ, ಗುಡಿಹಾಳ ಹನುಮಂತರಾವ್‌, ದೋಮಕುಂಟಿ ನಾರಾಯಣಪ್ಪ ಅವರು ರಾಯಚೂರು ನಗರದ ರಾಮಶಾಲಾ ಬಯಲಿನಲ್ಲಿ 1947 ರಲ್ಲಿ ಸತ್ಯಾಗ್ರಹ ಕುಳಿತಿದ್ದರು. ಸ್ವತಂತ್ರಕ್ಕಾಗಿ ಹೋರಾಟ ಆರಂಭಿಸಿದವರನ್ನೆಲ್ಲ ಹೈದರಾಬಾದ್‌ ಪ್ರಾಂತೀಯ ಸರ್ಕಾರವು ಬಂಧಿಸಿ ಕಾರಾಗೃಹಕ್ಕೆ ಹಾಕಿತು. ತ್ರಿವರ್ಣ ಧ್ವಜವನ್ನು ರಾಜವಿರೋಧಿ ಎಂದು ನಿಷೇಧಿಸದ್ದಲ್ಲದೆ, ತ್ರಿವರ್ಣ ಧ್ವಜ ಹಾರಿಸುವುದು ರಾಜದ್ರೋಹ ಎಂದು ಆದೇಶ ಹೊರಡಿಸಲಾಗಿತ್ತು.

ಬ್ರಿಟಿಷರ ಕಪಿಮುಷ್ಟಿಯಿಂದ ಹೊರಬಂದಿದ್ದ ದೇಶದ ಜನರೆಲ್ಲ ಪ್ರಥಮ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಹೈದರಾಬಾದ್‌ ಪ್ರಾಂತಕ್ಕೆ ಒಳಪಟ್ಟಿದ್ದ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ನಿಜಾಮ ಆಡಳಿತ ವಿರೋಧಿ ಹೋರಾಟಗಳು ತೀವ್ರಗೊಂಡವು. ಜಿ. ಮಧ್ವರಾಜ, ಲಕ್ಷ್ಮಣಾಚಾರ್ಯ, ಲಿಂಗನಕಾನ ದೊಡ್ಡಿಯ ರಾಘವೇಂದ್ರ ಕೂಡಾ ಒಕ್ಕೂಟಕ್ಕೆ ಸೇರುವಂತೆ ರಾಯಚೂರಿನಲ್ಲಿ ಹೋರಾಟ ಮಾಡಿ ಬಂಧನಕ್ಕೊಳಗಾದರು.

ತ್ರಿವರ್ಣ ಧ್ವಜದ ಪ್ರೇರಣೆ: ತ್ರಿವರ್ಣ ಧ್ವಜ ನಿಷೇಧಿಸಿದ್ದ ಕ್ಲಿಷ್ಟಕರ ಸನ್ನಿವೇಶದಲ್ಲಿ ಆಗಸ್ಟ್‌ 15, 1947 ರಂದು ಮಟಮಾರಿ ನಾಗಪ್ಪ ಅವರು ಅಪ್ರತಿಮ ಸಾಹಸ ಮೆರೆದರು. ಪೊಲೀಸರ ಕಣ್ಣುತಪ್ಪಿಸಿ ಸಾತ್‌ ಕಚೇರಿ (ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ) ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಅವರೊದಿಗೆ ಸ್ವಾತಂತ್ರ್ಯ ಸೇನಾನಿಗಳಾದ ಶರಭಯ್ಯಸ್ವಾಮಿ, ಚಂದ್ರಯ್ಯ ಮತ್ತು ಪರ್ವತರೆಡ್ಡಿ ಇದ್ದರು. ಜೀವದ ಹಂಗುಬಿಟ್ಟು ಮಾಡಿದ ಈ ಸಾಹಸವು ವಿಮೋಚನಾ ಹೋರಾಟಕ್ಕೆ ಹೊಸ ಪ್ರೇರಣೆಯಾಯಿತು.

ರಾಯಚೂರು, ಲಿಂಗಸುಗೂರು, ಸಿಂಧನೂರು, ಕಲ್ಲೂರ, ಮಾನ್ವಿಗಳಲ್ಲಿ ಅನಾಮಿಕರು ವಿವಿಧ ಕಡೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಪೊಲೀಸರಿಂದ ತಪ್ಪಿಸಿಕೊಂಡರು. ನಿಜಾಮ ಆಡಳಿತದಲ್ಲಿದ್ದ ಸೈನಿಕರು ಗ್ರಾಮಗಳಲ್ಲಿ ಪಥಸಂಚಲನ ನಡೆಸಿ ಭಯದ ವಾತಾವರಣ ಹುಟ್ಟುಹಾಕಿದರು. ಆದರೂ ರಾಯಚೂರು ತಾಲ್ಲೂಕಿನ ಹೆಂಬೆರಾಳಿಯಲ್ಲಿ ಕವಿ ಶಾಂತರಸರು ತ್ರಿವರ್ಣ ಧ್ವಜ ಹಾರಿಸಿದರು. ಅಕ್ಟೋಬರ್‌ 2, 1947 ರಂದು ಸದಾಶಿವರಾವ್‌ ಪುರೊಹೀತರ ನೇತೃತ್ವದಲ್ಲಿ ರಾಯಚೂರಿನ ರೈಲ್ವೆ ನಿಲ್ದಾಣದಿಂದ ವಿದ್ಯಾರ್ಥಿಗಳಿಂದ ಹೋರಾಟವೊಂದನ್ನು ಆಯೋಜಿಸಲಾಗಿತ್ತು. ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ನಿಜಾಮ ಸರ್ಕಾರದ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಲ್ಲದೆ, 32 ಜನರನ್ನು ಬಂಧಿಸಿ 30 ಜನರನ್ನು ಕಾರಾಗೃಹದಲ್ಲಿ ಇರಿಸಿದ್ದರು.

ಹೋರಾಟಗಳನ್ನು ಬಗ್ಗುಬಡಿಯುವ ಉದ್ದೇಶದಿಂದ ರಾಯಚೂರಿನ ಪ್ರತಿ ಗ್ರಾಮಕ್ಕೆ ರಜಾಕರನ್ನು, ಪಠಾಣರನ್ನು ರವಾನಿಸಲಾಯಿತು. ಭೀತಿಗೊಳಗಾದ ಜನರು ಗ್ರಾಮಗಳನ್ನು ತೊರೆದು ಜಿಲ್ಲೆಯ ಗಡಿಗಳಲ್ಲಿ ಶಿಬಿರಗಳನ್ನು ಕಟ್ಟಿಕೊಂಡರು. ವಯೋವೃದ್ಧರು, ಮಹಿಳೆಯರು ಮಾತ್ರ ಗ್ರಾಮಗಳಲ್ಲಿ ಉಳಿಯುವಂತಾಯಿತು. ಈ ಅಸಹಾಯಕ ಪರಿಸ್ಥಿತಿಯನ್ನು ಬಳಸಿಕೊಂಡ ರಜಾಕರು ಹಿಂಸೆ, ದಬ್ಬಾಳಿಕೆ ಪ್ರಾರಂಭಿಸಿದರು. ಕೆಲವು ಕಡೆ ಮಹಿಳೆಯರ ಮೇಲೆ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ನಡೆಸಿದರು.

ಹೈದರಾಬಾದ್‌ ಸಂಸ್ಥಾನದಿಂದ ವಿಮೋಚನೆಯಾಗಲು ನಡೆಸಿದ ಹೋರಾಟ ಕೆಲವು ನಾಯಕರಿಗೆ ಮಾತ್ರ ಸಿಮೀತವಾಗಿರಲಿಲ್ಲ. ಜನಸಾಮಾನ್ಯರು ಸಂಕಷ್ಟ ಅನುಭವಿಸಿದರು, ಸ್ವತಂತ್ರಕ್ಕಾಗಿ ಹೋರಾಡಿದವರ ಬಲಿದಾನವೂ ಆಗಿ ಹೋಗಿದೆ. 

ಪ್ರತಿಕ್ರಿಯಿಸಿ (+)