ಗುರುವಾರ , ಜನವರಿ 20, 2022
15 °C
ವೇಗ ನಿಯಂತ್ರಕ ಮಾನದಂಡಗಳ ಉಲ್ಲಂಘನೆ: ಸ್ಥಳೀಯರ ಆರೋಪ

ರಾಯಚೂರು: ಅವೈಜ್ಞಾನಿಕ ರಸ್ತೆ ಉಬ್ಬು, ಅಪಘಾತ ಭೀತಿ

ಶರಣಪ್ಪ ಆನೆಹೊಸೂರು Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು (ಹಂಪ್ಸ್)ಗಳು ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತಿವೆ.

ವೇಗ ನಿಯಂತ್ರಕಗಳನ್ನು ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಾಕಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿವೆ. ಹಳ್ಳಿ ರಸ್ತೆ, ತಾಲ್ಲೂಕು ರಸ್ತೆ, ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗಳಲ್ಲಿ ವೇಗ ನಿಯಂತ್ರಕಗಳ ಹಾಕಲು ಪ್ರಮುಖ ಮಾನದಂಡಗಳಿವೆ. ಆದರೆ ಆ ಎಲ್ಲಾ ಮಾನದಂಡಗಳನ್ನು ಇಲ್ಲಿ ಉಲ್ಲಂಘನೆ ಮಾಡಲಾಗಿದೆ.

ರಸ್ತೆಯಲ್ಲಿ ಹಾಕಿದ ವೇಗ ನಿಯಂತ್ರಕಗಳು ರಾತ್ರಿ ಸಮಯದಲ್ಲಿ ಸರಿಯಾಗಿ ಕಾಣುವುದಿಲ್ಲ. ಆದ್ದರಿಂದ ಬೈಕ್ ಅಪಘಾತಗಳು ನಡೆಯುತ್ತಿವೆ. ರಸ್ತೆ ತಡೆ ಇದ್ದಲ್ಲಿ ರೇಡಿಯಂ ರಿಫ್ಲೆಕ್ಟರ್ ಹಾಕಬೇಕು. 100 ಮೀಟರ್ ಮೊದಲೇ ಸೂಚನಾ ಫಲಕ ಅಳವಡಿಸಬೇಕು. ಇಲ್ಲವೇ ಹಂಪ್ಸ್ ಇದ್ದಲ್ಲಿ ಬಳಿ ಬಣ್ಣದ ಪಟ್ಟಿಯನ್ನಾದರೂ, ಬಳಿಯಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸವಾರರು ಆರೋಪಿಸಿದರು.

ವಿಚಿತ್ರವೆಂದರೆ ಜನದಟ್ಟಣೆ ಪ್ರದೇಶ, ಶಾಲೆ, ಆಸ್ಪತ್ರೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಹಾದುಹೊಗುವ ರಸ್ತೆಗಳಿಗೆ ಉಬ್ಬು ಅಳವಡಿಸಿಲ್ಲ. ಆದರೆ ಕೆಲ ಕಡೆ ವಿಪರೀತವಾಗಿ ರಸ್ತೆಗಳಲ್ಲಿ ವೇಗ ನಿಯಂತ್ರಕಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆ ಅಡವಿಯಲ್ಲಿ ರಸ್ತೆ ಬದಿಗೆ ಒಂದೇ ಮನೆ ಇದ್ದ ಕಡೆಯೂ, ಎರಡೆರಡು ಸ್ಪೀಡ್ ಬ್ರೇಕರ್ ಹಾಕಿದ್ದಾರೆ

ಅವೈಜ್ಞಾನಿಕ ಹಾಗೂ ಅನಗತ್ಯವಾಗಿ ನಿರ್ಮಿಸಿದ ಉಬ್ಬುಗಳ ಕಾರಣದಿಂದ ಹೆಚ್ಚಿನ ಇಂಧನ ಅಪವ್ಯಯವಾಗುತ್ತಿದೆ. ಇದರಿಂದ ವಾಹನಗಳಿಗೆ ಧಕ್ಕೆಯಾಗುತ್ತಿದೆ. ಬೈಕ್ ಸವಾರರ ಸೊಂಟಕ್ಕೂ ಪೆಟ್ಟು ಬಿಳುತ್ತಿದೆ. ಟಾಯರ್ ಬೇಗನೆ ಸವಿಯುತ್ತಿವೆ. ಇದು ಅಲ್ಲದೇ ಇನ್ನಿತರ ಹಾನಿಗಳು ಆಗುತ್ತಿವೆ.

ತಾಲ್ಲೂಕಿನ ಆಶಿಹಾಳ ತಾಂಡಾ, ಆಮದಿಹಾಳ, ಅಂಕಲಿಗಿ ಮಠ ರಸ್ತೆ, ನರಕಲದಿನ್ನಿ, ಆನೆಹೊಸೂರು ಸೇರಿದಂತೆ ಇನ್ನಿತರ ಗ್ರಾಮಗಳ ಮುಖ್ಯ ರಸ್ತೆಗಳಲ್ಲಿ 10 ಮೀಟರ್ ಮುಂಚಿತವಾಗಿ ಸ್ಪೀಡ್ ಬ್ರೇಕರ್ ಇದೆ. ಆನೆಹೊಸೂರು ಗ್ರಾಮದ 1 ಕಿ.ಮೀ. ರಸ್ತೆಯಲ್ಲಿ 18 ರಸ್ತೆ ಉಬ್ಬಗಳನ್ನು ನಿರ್ಮಿಸಿದ್ದಾರೆ.

ಸ್ಪೀಡ್ ಬ್ರೇಕರ್‌ನಿಂದ ಅನಾನುಕೂಲತೆ ಅಧಿಕ. ಅನಗತ್ಯವಾಗಿ ಕೆಲವು ಕಡೆ ಸೂಚನಾ ಫಲಕ ಹಾಕಲಾಗಿದೆ. ಆದರೆ, ಅಗತ್ಯ ಇದ್ದ ಕಡೆ ಇಲ್ಲ. ಇದರಿಂದ ವಾಹನ ಸವಾರರಿಗೆ ಸ್ಪೀಡ್ ಬ್ರೇಕರ್ ಇರುವುದು ತಿಳಿಯದೇ ವಾಹನ ಓಡಿಸುವುದರಿಂದ ವಾಹನಕ್ಕೂ ಹಾನಿ. ಸವಾರರಿಗೂ ಪೆಟ್ಟು ಬಿಳುತ್ತಿದೆ. ಕೆಲ ಕಡೆ ರಸ್ತೆ ಉಬ್ಬಿಗೆ ಬಳಿದಿರುವ ಬಣ್ಣ ಹಾಗೂ ಅಂಟಿಸಿರುವ ಪ್ರತಿಫಲಕಗಳು ಮಾಸಿ ಹೋಗಿವೆ. ಇಲ್ಲೊಂದು ರಸ್ತೆ ಉಬ್ಬು ಇದೆ ಎನ್ನುವುದು ಬೈಕ್ ಸವಾರ ಬಿದ್ದಾಗಲೇ ಅಥವಾ ಚಲಾಯಿಸುತ್ತಿದ್ದ ವಾಹನದಲ್ಲಿರುವ ಪ್ರಯಾಣಿಕರು ಒಮ್ಮೆಲೆ ಜಿಗಿದು ಕುಳಿತಾಗಲೇ ಅನುಭವಕ್ಕೆ ಬರುತ್ತದೆ.

‘ಶಾಲಾ-ಕಾಲೇಜು ಹಾಗೂ ಆಸ್ಪತ್ರೆ ಇರುವ ಕಡೆ ಮಾತ್ರ ಸ್ಪೀಡ್ ಬ್ರೇಕರ್ ಹಾಕಬೇಕು. ಉಳಿದ ಕಡೆ ಹಾಕಬಾರದು ಎಂದು ಸುಪ್ರಿಂ ಕೋರ್ಟ್‌ ಮಾರ್ಗದರ್ಶನ ಇದೆ‘ ಎಂದು ಗುತ್ತಿಗೆದಾರ್ ನಾಗರಾಜ ತುಪ್ಪದೂರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು