ಗುರುವಾರ , ನವೆಂಬರ್ 14, 2019
19 °C

ರಾಯಚೂರು: ಗಣ್ಯರಿಗೆಲ್ಲ ಸರ್ಕಾರಿ ವಸತಿ, ಖಾಸಗಿ ಊಟ!

Published:
Updated:
Prajavani

ರಾಯಚೂರು: ಈ ಮೊದಲು ಪ್ರವಾಸಕ್ಕೆ ಬರುತ್ತಿದ್ದ ಗಣ್ಯ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸರ್ಕಿಟ್‌ ಹೌಸ್‌ಗಳಿಗೆ ಮತ್ತು ಪ್ರವಾಸಿ ಮಂದಿರಗಳಿಗೆ ಊಟ ಮಾಡುವುದಕ್ಕಾಗಿಯೆ ಹೋಗುತ್ತಿದ್ದರೂ, ಈಗ ಊಟದ ವ್ಯವಸ್ಥೆ ಇದೆಯೇ ಎಂದು ವಿಚಾರಿಸಿಕೊಂಡು ಹೋಗುತ್ತಾರೆ!

ಬಾಣಸಿಗರ ಕೈರುಚಿಯು ಗಣ್ಯರನ್ನು ಸೆಳೆಯುತ್ತಿತ್ತು. ಭೋಜನ ಸವಿದ ಸಂತುಷ್ಟದಲ್ಲಿ ಗಣ್ಯರು, ನಿರೀಕ್ಷೆಗೂ ಮೀರಿ ಕೆಲಸ ಮಾಡಿಕೊಟ್ಟು ಹೋಗುತ್ತಿದ್ದರು. ಪ್ರವಾಸಿ ಮಂದಿರಗಳು ಬಾಣಸಿಗರ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದವು. ಮಾಂಸಾಹಾರ ಪ್ರಿಯರಿಗೆ, ಸಸ್ಯಹಾರ ಪ್ರಿಯರಿಗೆಲ್ಲ ವಿಧವಾದ ಊಟ ಮಾಡಿಕೊಡುತ್ತಿದ್ದರು. ಗಣ್ಯರ ಒಡನಾಡಿಗಳು ಬಾಣಸಿಗರ ಸ್ನೇಹ ಸಂಪಾದಿಸಿಕೊಳ್ಳಲು ಕಾತುರರಾಗಿರುತ್ತಿದ್ದರು. ಪ್ರತ್ಯೇಕವಾಗಿ ಬಂದು ಗಣ್ಯರ ಹೆಸರಿನಲ್ಲಿ ಊಟ ಮಾಡಿಕೊಂಡು ಹೋಗುತ್ತಿದ್ದರು. ಖುಷಿಯಿಂದ ಭಕ್ಷಿಸು ಕೂಡಾ ನೀಡುತ್ತಿದ್ದರು ಎನ್ನುವ ನೆನಪುಗಳನ್ನು ನಿವೃತ್ತ ಸರ್ಕಾರಿ ಹಿರಿಯ ಅಧಿಕಾರಿಗಳು ಈಗಲೂ ಪುಂಖಾನುಪುಂಖವಾಗಿ ಹೇಳುತ್ತಾರೆ.

ರಾಯಚೂರು, ಸಿಂಧನೂರಿನಲ್ಲಿ ಎರಡು ಸುಸಜ್ಜಿತ ಸರ್ಕಿಟ್‌ ಹೌಸ್‌ಗಳಿವೆ. ಮಾನ್ವಿಗೆ ಸರ್ಕಿಟ್‌ ಹೌಸ್‌ ಮಂಜೂರಿಯಾಗಿದ್ದು, ನಿರ್ಮಾಣ ಆಗಬೇಕಿದೆ. ಎಲ್ಲ ತಾಲ್ಲೂಕು ಕೇಂದ್ರಗಳು ಸೇರಿ ಜಿಲ್ಲೆಯಾದ್ಯಂತ ಒಟ್ಟು 18 ಪ್ರವಾಸಿ ಮಂದಿರಗಳಿವೆ. ಇದಲ್ಲದೆ, ನಾಲ್ಕು ನಿರೀಕ್ಷಣಾ ಮಂದಿರಗಳು ಹಾಗೂ ವಿಶ್ರಾಂತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆಯು ನಿರ್ಮಾಣ ಮಾಡಿದೆ. ನಿರ್ವಹಣೆಯನ್ನೂ ಲೋಕೋಪಯೋಗಿ ಇಲಾಖೆಯೆ ನೋಡಿಕೊಳ್ಳುತ್ತಾ ಬಂದಿದೆ. ಸರ್ಕಿಟ್‌ಹೌಸ್‌ ಮತ್ತು ಪ್ರವಾಸಿ ಮಂದಿರಗಳಲ್ಲಿ ಅಡುಗೆ ಮಾಡುವವರ ಹುದ್ದೆಗಳು ಮಂಜೂರಿ ಇವೆ. ಆದರೆ, ದಶಕಗಳಿಂದ ನೇಮಕ ಮಾಡಿಕೊಂಡಿಲ್ಲ.

ಪ್ರವಾಸಿ ಮಂದಿರಗಳಲ್ಲಿರುವ ನಿರ್ವಹಣಾ ಸಿಬ್ಬಂದಿಯೆ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಸದ್ಯಕ್ಕೆ ಅಡುಗೆ ಮನೆಗಳು ಚಹಾ, ಕಾಫಿ ತಯಾರಿಸುವುದಕ್ಕೆ ಸಿಮೀತವಾಗಿವೆ. ಊಟ, ಉಪಹಾರವೆಲ್ಲವೂ ಹೋಟೆಲ್‌ಗಳಿಂದ, ರೆಸ್ಟೊರೆಂಟ್‌ಗಳಿಂದ ಸರಬರಾಜು ಆಗುತ್ತಿದೆ. ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬಾಣಸಿಗರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಊಟ ಹೊರಗಡೆಯಿಂದಲೇ ತರಬೇಕು.

ಗಣ್ಯರ ಬೇಕುಬೇಡುಗಳನ್ನು ನೋಡಿಕೊಳ್ಳುವುದಕ್ಕೆ ಆಯಾ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಧಾವಿಸುತ್ತಾರೆ. ಲೋಕೋಪಯೋಗಿ ಇಲಾಖೆಯಿಂದ ವಸತಿ ವ್ಯವಸ್ಥೆಯನ್ನು ಮಾತ್ರ ನಿರೀಕ್ಷಿಸಲಾಗುತ್ತದೆ. ಸರ್ಕಾರಿ ವಸತಿ ವ್ಯವಸ್ಥೆಯಲ್ಲಿ ಖಾಸಗಿ ರೆಸ್ಟೊರೆಂಟ್‌ಗಳಿಂದ ತರುವ ಭೋಜನವನ್ನು ಗಣ್ಯರಿಗೆ ನೀಡಲಾಗುತ್ತದೆ. ಈ ಬಗ್ಗೆ ಪ್ರಶ್ನಿಸಿ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕಿರುವ ರಾಜಕಾರಣಿಗಳು ಹೋಟೆಲ್‌ ಊಟವನ್ನು ಇಷ್ಟ ಪಡುತ್ತಿದ್ದಾರೆ ಎನ್ನುವುದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳುವ ಮಾತು.

ಪ್ರತಿಕ್ರಿಯಿಸಿ (+)