ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಅಚ್ಚುಕಟ್ಟಾಗಿ ನಡೆದ ಮತ ಎಣಿಕೆ

Last Updated 3 ಮೇ 2021, 3:38 IST
ಅಕ್ಷರ ಗಾತ್ರ

ರಾಯಚೂರು: ನಗರದ ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಮಸ್ಕಿ ವಿಧಾನಸಭೆ ಉಪಚುನಾವಣೆ ಮತಗಳ ಎಣಿಕೆಯು ಭಾನುವಾರ ಅಚ್ಚುಕಟ್ಟಾಗಿ ನಡೆಯಿತು.

ಮೂರು ಕೋಣೆಗಳಲ್ಲಿ 12 ಟೇಬಲ್‌ಗಳಲ್ಲಿ ಮತಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 26 ಸುತ್ತುಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು. ಯಾವುದೇ ತಾಂತ್ರಿಕ ದೋಷವಿಲ್ಲದೆ, ವಿಳಂಬಕ್ಕೆ ಅವಕಾಶ ಇಲ್ಲದಂತೆ ಹಾಗೂ ಗೊಂದಲವಿಲ್ಲದೆ ಏಜೆಂಟ್‌ರ ಎದುರಿಗೆ ಮತಗಳನ್ನು ಎಣಿಕೆ ಮಾಡಲಾಯಿತು.

ಮತಗಟ್ಟೆ ಸಿಬ್ಬಂದಿಗೆ, ಪೊಲೀಸರಿಗೆ, ಸಿಆರ್‌ಪಿಎಫ್‌ ಯೋಧರಿಗೆ, ಚುನಾವಣಾಧಿಕಾರಿಗಳಿಗೆ ಹಾಗೂ ಮಾಧ್ಯದವರಿಗೆ ಪ್ರತ್ಯೇಕ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳು ಪಡೆದ ಮತಗಳನ್ನು ಫಲಕದ ಮೇಲೆ ಬರೆದು, ಪರಿಶೀಲಿಸಿ ಆನಂತರ ಆನ್‌ಲೈನ್‌ ಮೂಲಕ ಪ್ರಕಟಿಸುವ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹಾಗೂ ಕ್ಷೇತ್ರದ ಚುನಾವಣಾಧಿಕಾರಿ ರಾಜಶೇಖರ್‌ ಡಂಬಳ ಸೇರಿದಂತೆ ವಿವಿಧ ಸ್ತರದ ಅಧಿಕಾರಿಗಳು ವಹಿಸಿಕೊಂಡಿದ್ದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗಲಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಏಪ್ರಿಲ್‌ 17 ರಂದು ಮಸ್ಕಿ ಕ್ಷೇತ್ರದಾದ್ಯಂತ ನಡೆದ ಮತದಾನ ದಿನದಿಂದ ಆರಂಭಿಸಿ ಮತಗಳ ಎಣಿಕೆ ಪ್ರಕ್ರಿಯೆ ನಡೆಯುವವರಿಗೂ ಅಧಿಕಾರಿಗಳೆಲ್ಲ ಪೂರ್ವ ಯೋಜನೆ ರೂಪಿಸಿಕೊಂಡು ಕಾರ್ಯಗತಗೊಳಿಸಿದರು. ಮತದಾನದ ದಿನದಂದು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ನಿಯೋಜಿಸಲಾಗಿತ್ತು. ಆನಂತರ ರಾಯಚೂರಿನಲ್ಲಿ ಸ್ಥಾಪಿಸಿದ್ದ ಸ್ಟ್ರಾಂಗ್‌ ರೂಮ್‌ಗೂ ಬಿಗಿ ಕಾವಲು ಏರ್ಪಡಿಸಲಾಗಿತ್ತು.

ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರು ಹಗಲಿರುಳು ಮತಪೆಟ್ಟಿಗೆಗಳನ್ನು ಇರಿಸಿದ್ದ ಸ್ಟ್ರಾಂಗ್‌ ರೂಂ ಸೇರಿದಂತೆ ಮತ ಎಣಿಕೆ ಕೇಂದ್ರಕ್ಕೆ ರಕ್ಷಣೆ ಒದಗಿಸಿದ್ದರು. ಆಹಾರ,ನೀರು: ಮತಗಳ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯೂ ಸೇರಿದಂತೆ ಎಲ್ಲರಿಗೂ ಬೆಳಿಗ್ಗೆ ಉಪಹಾರ, ಚಹಾ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್‌ ನಿಯಮ: ಕೋವಿಡ್‌ ಮಹಾಮಾರಿ ಮಧ್ಯೆಯೇ ಮಸ್ಕಿ ಉಪಚುನಾವಣೆ ನಡೆದಿದೆ.

ಮತಗಳ ಎಣಿಕೆ ಸಂದರ್ಭದಲ್ಲಿಯೂ ಕೋವಿಡ್‌ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಏಜೆಂಟರು ಪಿಪಿಇ ಕಿಟ್‌ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಮತಗಳ ಎಣಿಕೆ ಮಾಡುವ ಸಿಬ್ಬಂದಿಗೆ ಕೋವಿಡ್‌ ನೆಗೆಟಿವ್‌ ಇರುವುದು ಕಡ್ಡಾಯ ಮಾಡಲಾಗಿತ್ತು. ಕೇಂದ್ರದಲ್ಲಿ ಎಲ್ಲರಿಗೂ ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಜರ್‌ ಬಳಕೆ ಕಡ್ಡಾಯ ಮಾಡಲಾಗಿತ್ತು. ಕೋವಿಡ್‌ಗೆ ಸಂಬಂಧಿಸಿದ್ದೆಲ್ಲವೂ ಕಡ್ಡಾಯಗೊಳಿಸಿದ್ದರಿಂದ ಯಾವುದೇ ಸೋಂಕಿನ ಭೀತಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT