ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡೂರು ತಾಂಡಾ: ನೀರಿಗಾಗಿ 7 ಕಿಮೀ ಸಂಚಾರ

Last Updated 4 ಮೇ 2021, 16:45 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದಗಣಿ: ಸಮೀಪದ ಗೌಡೂರು ತಾಂಡಾದಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ಕೊಳವೆಬಾವಿ ಸ್ಥಗಿತಗೊಂಡಿದ್ದರಿಂದ ಜನರು ಪ್ರತಿನಿತ್ಯ 7 ಕಿಮೀ ದೂರದಿಂದ ನೀರು ತೆಗೆದುಕೊಂಡು ಬರುತ್ತಿದ್ದಾರೆ.

ದೂರದಿಂದ ಸೈಕಲ್ ಗಾಡಿಗಳ ಮೂಲಕ ಪಟ್ಟಣಕ್ಕೆ ಬಂದು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಸರಿಯಾಗಿ ಗಮನಹರಿಸಿಲ್ಲ ಎಂದು ಗ್ರಾಮಸ್ಧರು ಆರೋಪಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯಿಂದ ಕೊಳವೆಬಾವಿ ಕೊರೆಸಿ, ಮಿನಿ ವಾಟರ್ ಟ್ಯಾಂಕ್ ನಿರ್ಮಿಸಲಾಗಿತ್ತು. ಐದು ವರ್ಷಗಳಾದರೂ ಅದರ ಉದ್ದೇಶ ಈಡೇರದೆ ದುಃಸ್ಥಿತಿಯಲ್ಲಿದೆ.2011-12ನೇ ಸಾಲಿನ ಎನ್ಆರ್‌ಡಬ್ಲುಡಿಪಿ ಯೋಜನೆಯಲ್ಲಿ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿತ್ತು. ₹6 ಲಕ್ಷ ವೆಚ್ಚದ ಈ ಯೋಜನೆಯಲ್ಲಿ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ ಮಿನಿ ಟ್ಯಾಂಕ್‌ಗಳಿಗೆ ಪೈಪ್‌ಲೈನ್‌ ಸಂಪರ್ಕ ಮಾಡಿ ನೀರು ಪೂರೈಸಬೇಕಾಗಿತ್ತು. ಹಣ ವೆಚ್ಚವಾಗಿದೆ, ಆದರೆ ನೀರು ಬಂದಿಲ್ಲ.

ಮಿನಿ ಟ್ಯಾಂಕ್‌ಗೆ ಪೈಪ್‌ಲೈನ್‌ ಸಂಪರ್ಕವಿಲ್ಲ. ಕಳಪೆ ಕಾಮಗಾರಿ ಆರೋಪದಿಂದ ನಾಲ್ಕು ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.ಮಿನಿ ಟ್ಯಾಂಕ್‌ಗಳು ಹಾಳಾಗಿವೆ. ನೀರು ದೊರಕುತ್ತದೆ ಎಂದು ನಿರೀಕ್ಷಿಸಿದ್ದ ತಾಂಡದ ಜನರು ನಿರಾಸೆಗೀಡಾಗಿದ್ದಾರೆ.

ಗುತ್ತಿಗೆದಾರ ಹಾಗೂ ಲಿಂಗಸುಗೂರಿನ ಜಿಲ್ಲಾ ಪಂಚಾಯಿತಿ ವಿಭಾಗದ ಎಂಜಿನಿಯರುಗಳ ನಿರ್ಲಕ್ಷ್ಯದಿಂದ ನೀರು ಪೂರೈಸುವ ಯೋಜನೆಯು ಹಳ್ಳ ಹಿಡಿದಿದೆ ಎಂದ ತಾಂಡಾದ ನಿವಾಸಿ ಹಂಪಣ್ಣ ನಾಯ್ಕ ಹೇಳಿದರು.

ಮೇವು, ನೀರಿಗಾಗಿ ಜಾನುವಾರುಗಳ ಅಲೆದಾಟ

ಹಟ್ಟಿ ಚಿನ್ನದಗಣಿ: ಹಳ್ಳ-ಕೊಳ್ಳಗಳಲ್ಲಿ ನೀರು ಬತ್ತಿದ ಪರಿಣಾಮ ಬಿಸಿಲಿನಲ್ಲಿ ದನ–ಕರುಗಳು ಮೇವು ಹಾಗೂ ನೀರು ಹುಡುಕುತ್ತಾ ಅಡವಿಯಲ್ಲಿ ಅಲೆದಾಡುವಂತಾಗಿದೆ.

ಎರಡು ವಾರಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹಳ್ಳ-ಕೊಳ್ಳಗಳಲ್ಲಿದ್ದ ಅಲ್ಪಸ್ವಲ್ಪ ನೀರು ಬತ್ತಿ ಹೋಗುತ್ತಿದೆ.

ಮಳೆ ಕೈಕೊಟ್ಟ ಕಾರಣ ಹಳ್ಳ, ಕೆರೆ, ಬಾವಿಗಳಲ್ಲಿ ನೀರಿಲ್ಲ. ಹಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ನೀರಿಲ್ಲದೆ ಹನಿ ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬೇಸಿಗೆ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವ ಕೆಲಸಗಳು ಸಿಗುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗದ ಕಾರಣ ಜನತೆ ಗುಳೆ ಹೋಗುತ್ತಿರುವುದು ಕಂಡುಬರುತ್ತಿದೆ.

‘ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುವ ಸಂಭವವಿದೆ. ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೋಳ್ಳಬೇಕು‘ ಎಂದು ರೈತ ಗುಂಡಪ್ಪಗೌಡ ಪೋಲೀಸ್ ಪಾಟೀಲ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT