ಭಾನುವಾರ, ನವೆಂಬರ್ 17, 2019
28 °C

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತದ ಎರಡನೇ ಬೆಳೆಗೆ ನೀರು: ಶ್ರೀರಾಮುಲು

Published:
Updated:
Prajavani

ಮಾನ್ವಿ: ‘ತುಂಗಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ಎರಡನೇ ಬೆಳೆಗೆ ಎಡದಂಡೆ ನಾಲೆಯಿಂದ ನೀರು ಹರಿಸುವ ಕುರಿತು ಐಸಿಸಿ ಸಭೆ ಕರೆದು ಶೀಘ್ರದಲ್ಲಿ ತೀರ್ಮಾನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ರಾಜ್ಯ ಸರ್ಕಾರ ಜಿಲ್ಲೆಯ ರೈತರ ಹಿತ ಕಾಪಾಡಲು ಬದ್ಧವಾಗಿದೆ. ರಾಯಚೂರಿನಲ್ಲಿ ಸರ್ಕಾರಿ ನರ್ಸಿಂಗ್‌ ಕಾಲೇಜು ನಿರ್ಮಾಣಕ್ಕೆ ₹  37ಕೋಟಿ ಹಾಗೂ ಗೂಗಲ್‌ ಬಳಿ ಕೃಷ್ಣಾ ನದಿಗೆ ಬ್ಯಾರೇಜ್‌ (ಸಮಾನಾಂತರ ಜಲಾಶಯ) ನಿರ್ಮಾಣಕ್ಕೆ ₹ 189ಕೋಟಿ ಅನುದಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು. 

’ಜಿಲ್ಲೆಯ ನೆರೆ ಪರಿಹಾರಕ್ಕಾಗಿ  ₹ 6 ಕೋಟಿ ಅನುದಾನ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗಿದೆ. ಎಲ್ಲಾ ನೆರೆ ಸಂತ್ರಸ್ತರಿಗೆ ಹಂತ ಹಂತವಾಗಿ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಆಡಳಿತಕ್ಕೆ ಬಂದ ನೂರು ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಜನಪರ ಆಡಳಿತ ನೀಡಲಾಗಿದೆ. ನೆರೆಹಾವಳಿ ಸಂದರ್ಭದಲ್ಲಿ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ. ವಿರೋಧ ಪಕ್ಷಗಳು ಅಧಿಕಾರ ಕಳೆದುಕೊಂಡ ಹತಾಶೆಯಿಂದ ಸರ್ಕಾರದ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿವೆ’ ಎಂದು ಅವರು ದೂರಿದರು.

ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ ಹಾಗೂ ಗಂಗಾಧರ ನಾಯಕ, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಎಸ್‌.ತಿಮ್ಮಾರೆಡ್ಡಿ ಭೋಗಾವತಿ, ಮಲ್ಲನಗೌಡ ನಕ್ಕುಂದಿ, ಶರಣಪ್ಪಗೌಡ ನಕ್ಕುಂದಿ, ಮ್ಯಾಕಲ್‌ ಅಯ್ಯಪ್ಪ ನಾಯಕ ಇದ್ದರು.

ಪ್ರತಿಕ್ರಿಯಿಸಿ (+)