ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಐಐಟಿ ಕಾಲೇಜಿಗೆ ನೀರು, ರಸ್ತೆ, ವಿದ್ಯುತ್‌’

Last Updated 18 ಜೂನ್ 2019, 14:48 IST
ಅಕ್ಷರ ಗಾತ್ರ

ರಾಯಚೂರು:’ತಾಲ್ಲೂಕಿನ ಸಿಂಗನೋಡಿ ಗ್ರಾಮದ ಬಳಿ ಕಾದಿರಿಸಿದ 65 ಎಕರೆ ಜಾಗದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಅಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಜಿ (ಐಐಐಟಿ) ಸ್ಥಾಪನೆಗೆ ಕೇಂದ್ರ ತಂಡವು ಅನುಮೋದನೆ ನೀಡಿದೆ. ಅಲ್ಲಿ ತುರ್ತಾಗಿ ನೀರು, ವಿದ್ಯುತ್‌ ಹಾಗೂ ಸಂಪರ್ಕ ರಸ್ತೆ ನಿರ್ಮಿಸುವಂತೆ ಸೂಚಿಸಿದೆ’ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ನೀಡಿದರು.

ಸದ್ಯಕ್ಕೆ ಒಂದು ಎಂಎಲ್‌ಡಿ (ದಿನಕ್ಕೆ 10 ಲಕ್ಷ ಲೀಟರ್‌) ನೀರು ಹಾಗೂ ವಿದ್ಯುತ್‌ ಸಂಪರ್ಕ ತುರ್ತಾಗಿ ಒದಗಿಸಬೇಕಿದೆ. ಮುಂದಿನ ದಿನಗಳಲ್ಲಿ ಮತ್ತೆ ಮೂರು ಎಂಎಲ್‌ಡಿ ನೀರು ಒದಗಿಸಬೇಕಿದೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದೆ. ಸಮಗ್ರ ಯೋಜನೆ ತಯಾರಿಸಿ ಕಳುಹಿಸುವಂತೆ ತಿಳಿಸಿದ್ದಾರೆ. ಈಗಾಗಲೇ ಯೋಜನೆ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಮಾತನಾಡಿ, ಐಐಐಟಿ ಸ್ಥಾಪನೆ ವಿಚಾರದಲ್ಲಿ ವಿಳಂಬ ಮಾಡುವುದು ಬೇಡ. ಅಗತ್ಯ ಸೌಕರ್ಯ ಒದಗಿಸುವುದಕ್ಕೆ ಅಧಿಕಾರಿಗಳೆಲ್ಲ ಮುತೂವರ್ಜಿ ವಹಿಸಬೇಕು. ರಾಯಚೂರು ನಗರ ನೀರು ಸರಬರಾಜು ವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ನೀರು ಒದಗಿಸುವುದಕ್ಕೆ ಯೋಜನೆ ಮಾಡಬೇಕು. ಕೃಷ್ಣಾ ನದಿಯಿಂದ ಪ್ರತ್ಯೇಕ ಪೈಪ್‌ಲೈನ್‌ ಅಳವಡಿಸುವ ಯೋಜನೆ ಸಿದ್ಧಪಡಿಸಿ. ಒಟ್ಟಾರೆ ನಾಲ್ಕು ಎಂಎಲ್‌ಡಿ ನೀರು ಒದಗಿಸಬೇಕಾಗಿರುವುದರಿಂದ ಈಗಲೇ ಸಮಗ್ರ ಯೋಜನೆಯಲ್ಲಿ ಈ ಅಂಶ ಉಲ್ಲೇಖಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಎಂದು ಸೂಚನೆ ನೀಡಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಐಐಐಟಿಗಾಗಿ ಪ್ರತ್ಯೇಕ ನೀರಿನ ಪೈಪ್‌ಲೈನ್‌ ಮಾಡುವುದಿದ್ದರೆ ಪಕ್ಕದ ಗ್ರಾಮಗಳಿಗೂ ಅದರಿಂದಲೇ ನೀರು ಒದಗಿಸುವ ಯೋಜನೆ ಮಾಡುವುದು ಒಳ್ಳೆಯದು ಎಂದರು.

ಐಐಐಟಿ ಸ್ಥಾಪನೆ ವಿಷಯದಲ್ಲಿ ಯಾವುದೇ ಅಡಚಣೆ ಆಗಬಾರದು ಎಂದು ಹೇಳಿದ ಸಚಿವ ವೆಂಕಟರಾವ್‌ ನಾಡಗೌಡ, ‘ರಾಜ್ಯ ಸರ್ಕಾರವು ಈ ವರ್ಷವನ್ನು ಜಲವರ್ಷ ಎಂದು ಘೋಷಿಸಿದೆ. ಇದರಲ್ಲಿ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಘೋಷಿಸಲಾಗಿದೆ. ಪಂಚಾಯತ್‌ ರಾಜ್‌ ಇಲಾಖೆ ಅಡಿಯಲ್ಲಿ ಗ್ರಾಮಗಳಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಕಾಲೇಜಿಗಾಗಿ ಬರುವ ಅನುದಾನವನ್ನು ಗ್ರಾಮಗಳ ಕುಡಿಯುವ ನೀರಿಗೆ ಬಳಕೆ ಮಾಡುವುದಕ್ಕೆ ಆಗುವುದಿಲ್ಲ’ ಎಂದು ಮನವರಿಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT