ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಕುಡಿಯುವ ನೀರಿಗೆ ಹಾಹಾಕಾರ

ಹಾಳಾದ ಬೋರ್‌ವೆಲ್‌, ಶುದ್ಧ ಕುಡಿಯುವ ನೀರಿನ ಘಟಕ: ಬೇಸಿಗೆಗೆ ಮುನ್ನವೇ ಗ್ರಾಮದಲ್ಲಿ ಪರದಾಟ
Last Updated 12 ಫೆಬ್ರುವರಿ 2023, 5:30 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಗಬ್ಬೂರು ಸಮೀಪದ ಖಾನಾಪುರ ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.

ಸುಮಾರು 2 ರಿಂದ 3 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ನೀರು ಪೂರೈಕೆ ಒದಗಿಸುತ್ತಿದ್ದ ಎರಡು ಕೊಳವೆ ಬಾವಿಗಳ ಪೈಕಿ ಒಂದು ಬತ್ತಿ ಹೋಗಿದೆ. ಗ್ರಾಮದಲ್ಲಿ ವರ್ಷದಿಂದ ಕುಡಿಯುವ ನೀರಿನ ತೊಂದರೆ ಎದುರಾಗಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಇಲ್ಲಿಯವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಗ್ರಾಮದ ಹೊರಭಾಗದಲ್ಲಿ ಕೊಳವೆಬಾವಿ ಕೊರೆಸಿದರೆ ನೀರು ಬರುವ ಸಾಧ್ಯತೆಯಿದೆ. ಆದರೆ ಗ್ರಾಮ ಪಂಚಾಯಿತಿ ಹೊಸ ಕೊಳವೆಬಾವಿ ಕೊರಿಸಲು ಮುಂದಾಗುತ್ತಿಲ್ಲ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವು ಪುನರಾರಂಭಿಸಿಲ್ಲ ಎಂದು ಪಂಚಾಯಿತಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಬೋರ್‌ವೆಲ್ ದುರಸ್ತಿಗೊಳಿಸಲು ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೆ, ನೋಡಲ್ ಅಧಿಕಾರಿಗೆ ಹೇಳಿದ್ದೇನೆ ಎನ್ನುತ್ತಾರೆ. ಪಂಚಾಯಿತಿ ನೋಡಲ್ ಅಧಿಕಾರಿಯಾಗಿರುವ ತಾಲ್ಲೂಕು ಪಂಚಾಯಿತಿ ಇಒ ಅವರು ಒಂದು ದಿನವೂ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರ ದೂರುತ್ತಾರೆ.

ಗ್ರಾಮದ ಹಲವು ಜನರು ದ್ವಿಚಕ್ರ ವಾಹನಗಳ ಮೂಲಕ ಸುತ್ತಲಿನ ತೋಟ, ಗಬ್ಬೂರಿನಿಂದ ನೀರು ತರಬೇಕಾಗಿದೆ. ವಾಹನ ಇಲ್ಲದವರ ಪರಿಸ್ಥಿತಿ ನಡೆದುಕೊಂಡೆ ದೂರದಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಇಲ್ಲದ ಬಡವರು ಏನು ಮಾಡಬೇಕು ಎಂದು ಗ್ರಾಮದ ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಎಂದು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಕ್ರಮ ಕೈಕೊಂಡಿಲ್ಲ. ಗ್ರಾಮದಲ್ಲಿ ಒಂದೇ ಬೋರ್‌ವೆಲ್ ಇರುವುದರಿಂದ ಎಲ್ಲ ಕೆಲಸ ಬದಿಗೊತ್ತಿ ಸರತಿಯಲ್ಲಿ ನಿಂತರೂ ನೀರು ಸಿಗುವುದಿಲ್ಲ’ ಎಂದು ವೃದ್ಧೆ ರಾಮವ್ವ ಅಳಲು ತೋಡಿಕೊಂಡರು.

ಗ್ರಾಮದಲ್ಲಿನ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಅನುಕೂಲ ಮಾಡಬೇಕು. ಇಲ್ಲವೇ ಗ್ರಾಮ ಪಂಚಾಯಿತಿ ಶಾಶ್ವತ ಕ್ರಮ ಕೈಕೊಳ್ಳಬೇಕು ಎಂದು ಗ್ರಾಮಸ್ಥರಾದ ತಿರುಕಮ್ಮ, ಮಲ್ಲಮ್ಮ ಒತ್ತಾಯಿಸಿದರು.

ಹೇಮನಾಳ ಗ್ರಾಮ ಪಂಚಾಯಿತಿಗೆ ಕಳೆದ ಎಂಟು ವರ್ಷದಿಂದ ಪಂಚಾಯಿತಿಗೆ ಚುನಾವಣೆ ನಡೆಯದೆ ಇರುವುದರಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರೇ ನೋಡಲ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT