ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದಗಲ್: ಶುದ್ಧ ನೀರಿಗೆ ನಿತ್ಯ ಪರದಾಟ

ಜಕ್ಕೆರಮಡವು: 6 ಕೊಳವೆ ಬಾವಿ ನೀರಿನಲ್ಲಿ ಉಪ್ಪಿನಾಂಶ ಹೆಚ್ಚಳ
Last Updated 11 ಮೇ 2022, 19:30 IST
ಅಕ್ಷರ ಗಾತ್ರ

ಮುದಗಲ್: ಸಮೀಪದ ಜಕ್ಕರಮಡವು ಗ್ರಾಮ ಹಾಗೂ ಇಲ್ಲಿನ ತಾಂಡಾದ ಜನರು ಶುದ್ಧ ಕುಡಿವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.

ಗ್ರಾಮ ಹಾಗೂ ತಾಂಡಾದ ಸೇರಿ 6 ಕೊಳವೆ ಬಾವಿಗಳಿವೆ. ಇದ್ದ 6 ಕೊಳವೆ ಬಾವಿಗಳಲ್ಲಿ ಉಪ್ಪು ನೀರಿದೆ. ಈ ನೀರು ಬಳಕೆಗೆ ಬರುತ್ತಿಲ್ಲ. ಈ ನೀರಿನಿಂದ ಜಳಕ ಮಾಡಿದರೆ ಕೂದಲು ಜಿಡ್ಡಗಟ್ಟುತ್ತಿವೆ. ಮೈಯಲ್ಲ ಉಪ್ಪುಗಟ್ಟುತ್ತಿದೆ. ಮೈ ತಿಂಡಿಯಾಗುತ್ತದೆ. ಅಡುಗೆಗೆ ಬಳಕೆ ಮಾಡಿದರೆ ಅಡುಗೆ ರುಚಿ ಆಗುತ್ತಿಲ್ಲ.

ತಾಂಡಾ ಮತ್ತು ಗ್ರಾಮದ ಜನರು ಗ್ರಾಮದ ಹೊರ ವಲಯದ ಕಿ.ಮೀ. ದೂರದಲ್ಲಿರುವ ಸಣ್ಣ ನೀರು ಯೋಜನೆಯ ಕೊಳವೆ ಬಾವಿಯಿಂದ ಸಿಹಿ ನೀರು ತರುತ್ತಾರೆ. ವಿದ್ಯುತ್ ಕೈಕೊಟ್ಟರೆ ಹಾಗೂ ಮೋಟರ್ ದುರಸ್ತಿಗೆ ಬಂದರೆ, ಕುಡಿವ ನೀರಿಗಾಗಿ ಹಿರೇಕುರುಬರ, ನಾಗಣ್ಣ ಇಲ್ಲವೆ ಅಡವಿ ತಿರುಗಿ ನೀರು ತರಬೇಕಾದ ಸ್ಥಿತಿ ಇದೆ.

ಗ್ರಾಮದ ಜನರಿಗೆ ಪ್ಲೋರೈಡ್ ಮುಕ್ತ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳಲ್ಲಿ ಒಂದು ಘಟಕ ನಿರ್ಮಾಣವಾದಾಗಿನಿಂದ ಆರಂಭವಾಗಿಲ್ಲ. ಈ ಪೈಕಿ ಒಂದು ಘಟಕ ಕಾರ್ಯ ನಿರ್ವಹಿಸುತ್ತಿವೆಯಾದರೂ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಶುದ್ಧ ಕುಡಿವ ನೀರಿನ ಘಟಕಗಳು ಬಾಯಿ ಮಾತಿಗಷ್ಟೇ ಸೀಮಿತವಾಗಿವೆ. ಇವು ಗ್ರಾಮದ ಜನರ ಬಾಯಾರಿಕೆ ತಣಿಸುವಲ್ಲಿ ವಿಫಲವಾಗಿವೆ.

ಹಳ್ಳದ ಹತ್ತಿರ ಇರುವ ಕೊಳವೆ ಬಾವಿಯಿಂದ ಬರುವ ನೀರಿನಿಂದ ಬಟ್ಟೆ, ಪಾತ್ರೆ ತೊಳೆಯುವುದಕ್ಕೆ ಬಳಕೆ ಮಾಡುತ್ತಾರೆ. ಈ ನೀರು ಕುಡಿಯಲು ಯೋಗ್ಯವಲ್ಲದಾಗಿದೆ. ಇನ್ನು ಕೆಲ ಕಡೆ ಇದ್ದ ಕೊಳವೆ ಬಾವಿಗಳಲ್ಲಿ ಬೇಸಿಗೆ ಬಂದರೆ ನೀರು ಬರಲ್ಲ. ಈ ಗ್ರಾಮದ ನೀರಿನ ಬವಣಿ ತಪ್ಪಿಸಲು ಸರ್ಕಾರ ₹ 1.3 ಕೋಟಿ ಖರ್ಚು ಮಾಡಿದರೂ ಗ್ರಾಮಸ್ಥರಿಗೆ ಸಮರ್ಪಕವಾಗಿ ಶುದ್ಧ ಕುಡಿವ ನೀರು ದೊರೆಯುತ್ತಿಲ್ಲ ಎಂದು ಗುರುರಾಜ ನಾಯಕ ದೂರಿದರು.

ಪ್ರತಿ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಶಾಸಕರು ಮೂರು ತಿಂಗಳಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ ವಿನಾಃ ಇಂದಿಗೂ ಸಮಸ್ಯೆ ಪರಿಹಾರ ಆಗಿಲ್ಲ ಎಂದು ಗ್ರಾಮಸ್ಥ ಸಿದ್ದಣ್ಣ ದೂರಿದರು.

ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಿಕೊಡಿ ಎಂದು ಕನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.

**

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಖ್ಯ ರಸ್ತೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂಜಾರ ನಿಗಮದಿಂದ ಮಂಜೂರು ಆಗಿದೆ. ಈ ಘಟಕಕ್ಕೆ ವಿದ್ಯುತ್ ಸಂಪರ್ಕ ಹಾಗೂ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಈ ಘಟಕ ಕಾರ್ಯನಿರ್ವಹಿಸುತ್ತಿಲ್ಲ.

-ಮಲ್ಲಿಕಾರ್ಜುನ್, ಪಿಡಿಒ, ಕನ್ನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT