ಮಸ್ಕಿ: ‘ತಾಲ್ಲೂಕಿನ ವ್ಯಾಸನಂದಿಹಾಳ-ಕನ್ನಾಳ ಸೇತುವೆ ಸೇರಿದಂತೆ ಕ್ಷೇತ್ರದ ವಿವಿಧ ಯೋಜನೆಗಳಿಗಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ತಂದಿದ್ದ ಬಹುಕೋಟಿ ಅನುದಾನವನ್ನು ನಾನೇ ತಂದಿದ್ದೇನೆ ಎಂಬುವಂತೆ ಶಾಸಕ ಆರ್. ಬಸನಗೌಡ ಅವರು ಕಾಂಗ್ರೆಸ್ ಬಾವುಟದೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಮಾಡುತ್ತಿರುವುದು ಖಂಡನೀಯ‘ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ತಿಳಿಸಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಮನವಿಗೆ ಸ್ಪಂದಿಸಿ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಈಗಾಗಲೇ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ ಕೆಲಸಗಳಿಗೆ ಪುನಃ ಗುದ್ದಲಿಪೂಜೆ ಮಾಡುವ ಮೂಲಕ ನಾವೇ ಅನುದಾನ ತಂದಿದ್ದೇವೆ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಈ ವರ್ತನೆಯನ್ನು ಶಾಸಕರು ನಿಲ್ಲಿಸದಿದ್ದರೆ ಬಿಜೆಪಿಯಿಂದ ಕ್ಷೇತ್ರದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕರಾಗಿ ಆಯ್ಕೆಯಾದ ಆರ್. ಬಸನಗೌಡ ಅವರು ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಬೇಕು. ಮಾಜಿ ಶಾಸಕರ ಅಧಿಕಾರದ ಅವದಿಯಲ್ಲಿ ಮುಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡುವುದು ಹಾಗೂ ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಬಾವುಟು ಹಿಡಿದುಕೊಂಡು ಕಾಮಗಾರಿಗಳ ಭೂಮಿಪೂಜೆ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಟಿಕೀಸಿದರು.
ಬಿಜೆಪಿ ಮಂಡಲ ಕಾರ್ಯದರ್ಶಿಗಳಾದ ಶರಣಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಯಾದವ್ ಇತರರು ಇದ್ದರು.
***
ನಾನು ಶಾಸಕನಾದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಅಧಿಕೃತವಾಗಿ ಕಾರ್ಯಾದೇಶ ಪಡೆದಿದ್ದರಿಂದ ಅವುಗಳಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಬಿಜೆಪಿ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಈ ಹಿಂದೆ ಮಾಜಿ ಶಾಸಕರಾಗಿದ್ದ ಅವರು, ಕ್ಷೇತ್ರದಲ್ಲಿ ಅನೇಕ ಯೋಜನೆಗಳಿಗೆ ಭೂಮಿ ಪೂಜೆ ಮಾಡಿದ್ದಾರೆ ಎಂಬುದನ್ನೂ ಬಿಜೆಪಿಯವರು ಮರೆಯಬಾರದು. ಕ್ಷೇತ್ರಕ್ಕೆ ನಾನು ಏನು ಮಾಡಿದ್ದೇನೆ. ಮಾಡುತ್ತಿದ್ದೇನೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ.
–ಆರ್. ಬಸನಗೌಡ, ಶಾಸಕರು, ಮಸ್ಕಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.