ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮೀಜಿಯಿಂದ‌ ಲೈಂಗಿಕ ಕಿರುಕುಳ: ಆಂಧ್ರ ಮೂಲದ ಮಹಿಳೆ ಆರೋಪ

Published : 23 ಸೆಪ್ಟೆಂಬರ್ 2024, 19:07 IST
Last Updated : 23 ಸೆಪ್ಟೆಂಬರ್ 2024, 19:07 IST
ಫಾಲೋ ಮಾಡಿ
Comments

ರಾಯಚೂರು: ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯ ಸುಲ್ತಾನಪುರದಲ್ಲಿ ಸ್ವಾಮೀಜಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬಲಗಂಪಲ್ಲಿ ಮೂಲದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮಹಿಳೆಯು ಅನೇಕ ವರ್ಷಗಳಿಂದ ಸು‌ಲ್ತಾನಪುರದಲ್ಲಿ ವಾಸವಾಗಿದ್ದಾರೆ. ಸಂಬಂಧಿಕರ ಮೂಲಕ ಸ್ವಾಮೀಜಿಯ ಪರಿಚಯವಾಗಿದೆ. ನಂತರ ಆಗಾಗ ಮಠಕ್ಕೆ ಬಂದು ಹೋಗುತ್ತಿದ್ದರು. ಈ ಅವಧಿಯಲ್ಲಿ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಸಂತ್ರಸ್ತ ಮಹಿಳೆಯು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಅಲ್ಲಿನ ಸಿಬ್ಬಂದಿಯು ಮಹಿಳಾ ಠಾಣೆಗೆ ಕಳುಹಿಸಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೇವದುರ್ಗ ತಾಲ್ಲೂಕಿನ ಗಬ್ಬೂರ್‌ ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ. ಗ್ರಾಮಸ್ಥರು ಒತ್ತಡ ಹಾಕಿದ್ದರಿಂದ ಅಲ್ಲಿಯೂ ಪೊಲೀಸರು ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.

ಸ್ವಾಮೀಜಿ ರಾಜಕೀಯ ಮುಖಂಡರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಸ್ವಾಮೀಜಿಯ ಶಿಷ್ಯಂದಿರು ದೂರು ದಾಖಲಿಸದಂತೆ ಆಮಿಷ ಒಡ್ಡಿದ್ದಾರೆ. ಆದರೆ, ಮಹಿಳೆ ಇದಕ್ಕೆ ಒಪ್ಪದಿದ್ದಾಗ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾರೆ ಎಂಬ ಮಾತು ಗ್ರಾಮಸ್ಥರಿಂದ ಕೇಳಿಬರುತ್ತಿದೆ.

ಪ್ರಕರಣದ ಬಗ್ಗೆ ಮಾಹಿತಿ ಕೊಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್‌ ಠಾಣೆಗೆ ಭೇಟಿಕೊಟ್ಟಿರುವ ಕುರಿತು ಮಹಿಳೆಯು ವಿಸಿಟರ್‌ ಬುಕ್‌ನಲ್ಲಿ ತನ್ನ ಹೆಸರು ಹಾಗೂ ಲೈಂಗಿಕ ಕಿರುಕಳ ನೀಡಿರುವ ಸ್ವಾಮೀಜಿಯ ಹೆಸರನ್ನೂ ಬರೆದು ಹೋಗಿದ್ದಾರೆ ಎನ್ನಲಾಗಿದೆ. 

‘ಮಹಿಳೆ ದೌರ್ಜನ್ಯಕ್ಕೆ ಒಳಗಾಗಿದ್ದಲ್ಲಿ ನಮ್ಮ ಕಚೇರಿಗೂ ಬಂದು ದೂರು ನೀಡಬಹುದು. ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT