ಸೋಮವಾರ, ಡಿಸೆಂಬರ್ 9, 2019
17 °C
ಜಿಪಂ ಜನಪ್ರತಿನಿಧಿಗಳ ಅಕ್ರೋಶದ ಮಾತುಗಳಿಗೆ ಅಧಿಕಾರಿಗಳ ಸ್ಪಷ್ಟನೆ

ಕಾನೂನಿನ ಚೌಕಟ್ಟಿನಲ್ಲಿ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಜನಪ್ರತಿನಿಧಿಗಳ ಆರೋಪದ ಮಾತುಗಳಿಗೆ ಉತ್ತರ ನೀಡಿದ ಅಧಿಕಾರಿಗಳು, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಲಾಗುವುದು. ಬೇರೆ ಬೇರೆ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದ್ದರಿಂದ ಕೆಲಸಗಳು ವಿಳಂಬವಾಗಿವೆ ಎಂದು ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸ್ಪಷ್ಟನೆ ನೀಡಿದರು. 

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡ್ರು ಮಾತನಾಡಿ, ಆರು ವರ್ಷವಾದರೂ ಲಿಂಗಸೂಗೂರಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಮಾಡಿಲ್ಲ. ಕಾಲುವೆಗಳಿಗೂ ನೀರಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಶೂ ಮತ್ತು ಸಾಕ್ಸ್ ಕಳಪೆ ಮಟ್ಟದಿಂದ ಕೂಡಿದ್ದು, ಸರ್ಕಾರಿ ನಿಯಮದ ಪ್ರಕಾರ ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ನೀಡುತ್ತಿಲ್ಲ ಎಂದು ಏರುದನಿಯಲ್ಲಿ ಆಕ್ರೋಶ ಹೊರಹಾಕಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾತಿ ಸಮಿತಿ ಅಧ್ಯಕ್ಷ ಖಾಸಿಂ ನಾಯಕ ಮಾತನಾಡಿ, ರಸ್ತೆ ಬದಿ ಹಚ್ಚಿರುವ ಸಸಿಗಳು ಒಣಗುತ್ತಿವೆ. ಸಸಿಗಳು ನೆಟ್ಟರೇ ಸಾಲದು ಅವುಗಳಿಗೆ ನೀರು ಹಾಕಿ ರಕ್ಷಿಸಬೇಕು. ದೇವಂಪಲ್ಲಿಯಲ್ಲಿ ಒಂದುವರೆ ವರ್ಷ ಕಳೆದರೂ ಶಾಲೆಯ ಕಾಮಗಾರಿ ನಡೆದಿಲ್ಲ. ಬೇಗ ಕಾಮಗಾರಿಗಳು ಮುಗಿಸಿ ಮಕ್ಕಳು ಬಯಲಲ್ಲಿ ಕುಳಿತು ಪಾಠ ಕೇಳುವುದನ್ನು ತಪ್ಪಿಸಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಸೂಕ್ಷ್ಮವಾಗಿ ಮಾತನಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

ಶಿಕ್ಷಣ ಇಲಾಖೆ: ಶೂ ಅವ್ಯವಹಾರ ತನಿಖೆಗಾಗಿ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕೂಡಲೇ ಎಲ್ಲಾ ಶಾಲೆಗಳಿಗಳಲ್ಲಿ ಎಸ್‌ಡಿಎಂಸಿ ಸಭೆ ಕರೆದು ಶೂ ಮತ್ತು ಸಾಕ್ಸ್ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಲಿನ ಪುಡಿ ಕಡಿಮೆ ಕೊಡುತ್ತಿದ್ದು, ಈ ರೀತಿ ಮಾಡಬೇಡಿ. ಸರಿಯಾಗಿ ವಿತರಿಸುವಂತೆ ಅಧಿಕಾರಿ ವೀರನಗೌಡ ಅವರಿಗೆ ತಾಕೀತು ಮಾಡಿದರು. 

ಹೈನುಗಾರಿಕೆ: ಮಾರ್ಚ್‌ ಒಳಗಡೆ ಅಗತ್ಯ ಇರುವ ಕಡೆ 50 ಹಾಲಿನ ಡೈರಿ ಆರಂಭಿಸಿ. ರೈತರಿಗೆ ಹೈನುಗಾರಿಕೆ ಬಗ್ಗೆ ಪ್ರೋತ್ಸಾಹಿಸಿ, ಮಾಹಿತಿ ಒದಗಿಸಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿ, ಪ್ರತಿ ಸಭೆಯಲ್ಲಿಯೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಿ ಆಗುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚಿಸಿದರು.

ಅಧಿಕಾರಿಗಳು ನೀಡಿದ ಮಾಹಿತಿ: ಜಲಾಮೃತ ಯೋಜನೆಯಲ್ಲಿ ಒಟ್ಟು 80 ಸಾವಿರ ಗಿಡಗಳನ್ನು ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯಿತಿ ಆವರಣದಲ್ಲಿ ನೆಟ್ಟು ಬೆಳೆಸುತ್ತಿದ್ದೇವೆ. ಶೀಘ್ರವೇ ಆ ವರದಿಯನ್ನು ಅಧ್ಯಕ್ಷರಿಗೆ ಮುಟ್ಟಿಸುತ್ತೇನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

191 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳ ಕಾಮಗಾರಿ ವಿವರ ಸಲ್ಲಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, 41 ಶೌಚಾಲಯ ನಿರ್ಮಿಸಿದ್ದೇವೆ. 150 ಕೇಂದ್ರಗಳಲ್ಲಿ ಸ್ಥಳದ ಅಭಾವದಿಂದ ಉಳಿದ ಕಾಮಗಾರಿ ಆಯಾ ಗ್ರಾಮ ಪಂಚಾಯಿತಿಗೆ ಕಾಮಗಾರಿ ವಹಿಸಲಾಗಿದೆ ಎಂದರು.

ಕಾಮಗಾರಿ ಮುಗಿಸಲು ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮಂಡಳಿ ವಿಭಾಗದ ಎಂಜಿನಿಯರುಗಳು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ: ಬಾಡಿಗೆ ಕಟ್ಟಡಗಳಿಗೆ ₹4 ಕೋಟಿ ಬಾಡಿಗೆ ನೀಡಬೇಕಿದೆ. ₹17ಕೋಟಿ 72ಲಕ್ಷ ದುಡ್ಡು ಸರ್ಕಾರದಿಂದ ಜಿಲ್ಲೆಗೆ ಬರಬೇಕಿದೆ. ಉಸ್ತುವಾರಿ ಸಚಿವರಿಗೆ ಈ ವಿಷಯ ಗಮನಕ್ಕೆ ತಂದಿದ್ದೇವೆ. ಶೀಘ್ರವೇ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರತಿಕ್ರಿಯಿಸಿ (+)