ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂವರೆ ವರ್ಷಗಳಲ್ಲಿ 20 ವಿಚಾರ ಸಂಕಿರಣ ಆಯೋಜನೆ: ಡಾ.ಬಿ.ವಿ.ವಸಂತಕುಮಾರ್‌

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಮಾಹಿತಿ
Last Updated 12 ಜೂನ್ 2022, 6:10 IST
ಅಕ್ಷರ ಗಾತ್ರ

ರಾಯಚೂರು: ‘ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಕಳೆದ ಎರಡೂವರೆ ವರ್ಷಗಳಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದೇನೆ. ಮಾಡಬೇಕಿರುವುದು ಇನ್ನೂ ಬಹಳಷ್ಟಿದೆ’ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘2019 ರ ನವೆಂಬರ್‌ನಿಂದ ಇದುವರೆಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಾಹಿತ್ಯ ಅಕಾಡೆಮಿಯಿಂದ 20 ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. 16 ಕಡೆಗಳಲ್ಲಿ ತರಬೇತಿ ಶಿಬಿರ/ಕಮ್ಮಟಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವುದಕ್ಕಾಗಿ ‘ಹದಿಹರೆಯಕ್ಕೆ ಸಾಹಿತ್ಯ ಸುಧೆ’ ಕಾರ್ಯಕ್ರಮ ರೂಪಿಸಿ, ಇದುವರೆಗೂ 15 ಕಾಲೇಜುಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಮಾಡಲಾಗಿದೆ’ ಎಂದು ಅವರು ಹೇಳಿದರು.

ಕೋವಿಡ್‌ ಸಮಯದಲ್ಲಿ ಆನ್‌ಲೈನ್‌ ಕಾರ್ಯಕ್ರಮಗಳ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ‘ಹೊಸಹಾದಿ ಹೊಸಹೆಜ್ಜೆ’ ಯೋಜನೆ ರೂಪಿಸಿ, ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ಚಾನೆಲ್‌ಗಳ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು. ಏಳು ಇ–ಉಪನ್ಯಾಸಗಳು, ಕನ್ನಡ ಸಂಸ್ಕೃತಿ, ಕನ್ನಡ ಕಾವ್ಯೋತ್ಸವದಂತಹ ಹಲವಾರು ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಒಟ್ಟಾರೆ 387 ಉಪನ್ಯಾಸಗಳನ್ನು ಅಂತರ್ಜಾಲದಲ್ಲಿ ನೇರಪ್ರಸಾರ ಮಾಡಿ ಅಪ್‌ಲೋಡ್‌ ಮಾಡಲಾಗಿದೆ. ಇದುವರೆಗೂ ಯೂಟ್ಯೂಬ್‌ ಚಂದಾದಾರರ ಸಂಖ್ಯೆ 15,400 ರಷ್ಟಾಗಿದೆ. ಅದರಲ್ಲಿ ಒಟ್ಟು 759 ವಿಡಿಯೋಗಳು ಬಳಕೆಗೆ ಲಭ್ಯವಿದೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ನೆರವಿನೊಂದಿಗೆ ಬೀದರ್‌ನ 50 ಗಡಿ ಗ್ರಾಮಗಳಲ್ಲಿ ಪ್ರತಿದಿನ ಸಾಹಿತ್ಯ ಚಟುವಟಿಕೆಗಳ ಮೂಲಕ ಕನ್ನಡ ಕಲಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಎರಡೂವರೆ ವರ್ಷದಲ್ಲಿ 30 ಕೃತಿಗಳನ್ನು ಮರುಮುದ್ರಣ ಮಾಡಲಾಗಿದ್ದು, ಇನ್ನೂ 11 ಪುಸ್ತಕಗಳ ಮರುಮುದ್ರಣ ಮಾಡುವುದಕ್ಕೆ ಕ್ರಮವಹಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ–75 ‘ವಜ್ರದ ಬೇರುಗಳು ಮಾಲಿಕೆಯ 10 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ದೇಶಿ ದರ್ಶನ ಮಾಲೆ ಏಳು ಕೃತಿಗಳು. ಹೀಗೆ ಒಟ್ಟು 130 ಪುಸ್ತಕಗಳನ್ನು ಮುದ್ರಿಸಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಎಲ್ಲ ಸಂಪನ್ಮೂಲ ವ್ಯಕ್ತಿಗಳ, ಸಂಘಟಕ ಸಹೃದಯರ ಮತ್ತು ಸರ್ಕಾರದ ಸಹಕಾರದಿಂದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಿದೆ. ಕನ್ನಡ ನಾಡು, ನುಡಿ ಪರಂಪರೆಯನ್ನು ವಿಕಸನಗೊಳಿಸುತ್ತ ಬಂದಿದೆ ಎಂದು ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌., ಸದಸ್ಯರಾದ ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಛಾಯಾ ಭಗವತಿ, ದತ್ತಗುರು ಎಸ್‌.ಹೆಗಡೆ ಇದ್ದರು.

ಅಕಾಡೆಮಿ ಪ್ರಶಸ್ತಿ ಪ್ರದಾನ ನಾಳೆ

ರಾಯಚೂರು: ‘ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ಮತ್ತು 2021ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ (ಜೂನ್‌ 13) ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಡಾ. ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ‘ಸಾಹಿತ್ಯ ಪಥ’ ಬಿಡುಗೊಳಿಸುವರು. ಸಾಹಿತಿ ಎಚ್‌.ಎಸ್‌.ಶಿವಪ್ರಕಾಶ್‌ ಅವರು ಅಭಿನಂದನಾ ನುಡಿಯಾಡುವರು’ ಎಂದು ಅವರು ತಿಳಿಸಿದರು.

ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಐವರು ಹಿರಿಯ ಸಾಹಿತಿಗಳಿಗೆ ತಲಾ ₹50 ಸಾವಿರ ನಗದು ಮತ್ತು ಗೌರವ ಪ್ರಶಸ್ತಿ ನೀಡಲಾಗುವುದು. 10 ಸಾಹಿತಿಗಳಿಗೆ 2021ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ. 2020 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ 19 ಕೃತಿಗಳಿಗೆ ‘ವರ್ಷದ ಪುಸ್ತಕ ಬಹುಮಾನ‘ ನೀಡಲಾಗುವುದು.10 ಕೃತಿಗಳಿಗೆ ದತ್ತಿ ಪುಸ್ತಕ ಬಹುಮಾನ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT