ಶನಿವಾರ, ಮಾರ್ಚ್ 28, 2020
19 °C

ಯರಗೇರಾ ತಾಲ್ಲೂಕು ಘೋಷಣೆಗೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತಾಲ್ಲೂಕಿನ ಯರಗೇರಾ ಹೋಬಳಿ ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಯರಗೇರಾ ತಾಲ್ಲೂಕು ರಚನಾ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಯರಗೇರಾ ಗ್ರಾಮವು ಕಂದಾಯ ಹೋಬಳಿ ಕೇಂದ್ರ ಸ್ಥಾನ, ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕೇಂದ್ರ ಸ್ಥಾನ ಹಾಗೂ ಸ್ನಾತಕೋತ್ತರ ಪದವಿ ಕೇಂದ್ರ, ನಾಡ ಕಾರ್ಯಾಲಯ, ಕಂದಾಯ ನಿರೀಕ್ಷಕರ ಕಾರ್ಯಾಲಯ, ವೃತ್ತ ಪೊಲೀಸ್ ನಿರೀಕ್ಷಕರ ಕಾರ್ಯಾಲಯ ಸೇರಿದಂತೆ ಹಲವು ಸೌಲಭ್ಯಗಳ ಹೊಂದಿದೆ.

ಜಡ್ಚೆರ್ಲಾ–ಹಗರಿ ರಾಷ್ಟ್ರೀಯ 167 ಮುಖ್ಯ ರಸ್ತೆ, ಕಂದಾಯ ಹೋಬಳಿ ವ್ಯಾಪ್ತಿಯಲ್ಲಿ 68,961.39 ಹೆಕ್ಟೇರ್‌ ಭೌಗೊಳಿಕ ಜಮೀನಿನ ಕ್ಷೇತ್ರ, ಗಿಲ್ಲೇಸುಗೂರು ಕಂದಾಯ ಹೋಬಳಿಯಲ್ಲಿ 57,987,25 ಹೆಕ್ಟೇರ್‌ ಭೌಗೊಳಿಕ ಜಮೀನು ಹೊಂದಿದೆ. ಯರಗೇರಾ ಸೀಮಾಂತರದಲ್ಲಿ 416.35 ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ ಹಲವು ಅಂಶಗಳು ತಾಲ್ಲೂಕಿಗೆ ಆಧಾರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹುಂಡೇಕಾರ್ ಸಮಿತಿ ರಚಿಸಿದಾಗ ಕೇವಲ ಮಸ್ಕಿ, ಸಿರವಾರ ತಾಲ್ಲೂಕಿಗೆ ಶಿಫಾರಸು ಮಾಡಿ ಯರಗೇರಾವನ್ನು ಕೈಬಿಟ್ಟಿದ್ದು ಸರಿಯಲ್ಲ. ಯರಗೇರಾ, ಗಿಲ್ಲೇಸೂಗೂರು ಹಾಗೂ ತಲಮಾರಿ ಜಿಲ್ಲಾ ಪಂಚಾಯಿತಿಯ ಸಂಪೂರ್ಣ ಗ್ರಾಮ ಹಾಗೂ ಕಲ್ಮಲಾ ಜಿಲ್ಲಾ ಪಂಚಾಯಿತಿಯ ಕೆಲಗ್ರಾಮಗಳನ್ನು ಸೇರಿಸಿ ಯರಗೇರಾ ತಾಲ್ಲೂಕು ರಚನೆ ಮಾಡಿದರೆ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ.

ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಗಡಿ ಹಂಚಿಕೆ ಮಾಡಿಕೊಂಡಿದ್ದು ಹಾಲಿ ಇರುವ ರಾಯಚೂರು ತಾಲ್ಲೂಕು ಕೇಂದ್ರವು ಜಿಲ್ಲಾ ಸ್ಥಾನದಲ್ಲಿ ಇರುವುದರಿಂದ ಉಪನೋಂದಣಿ ಅಧಿಕಾರಿಗಳ ಕಾರ್ಯಾಲಯ, ಶಿಕ್ಷಣಾಧಿಕಾರಿ ಕಾರ್ಯಾಲಯ ಸೇರಿದಂತೆ ಅನೇಕ ಕಚೇರಿಗಳು ಕಾರ್ಯ ನಿಮಿತ್ತ ತಿಂಗಳಾನುಗಟ್ಟಲೆ ಜನರು ಅಲೆದಾಡುವ ಪರಿಸ್ಥಿತಿ ಇದೆ. ನಿರ್ದಿಷ್ಟ ವಿಸ್ತೀರ್ಣ, ಜನಸಂಖ್ಯೆ ಹಾಗೂ ಹಲವೂ ವೈಶಿಷ್ಟ್ಯ ಅರ್ಹತೆ ಹೊಂದಿರುವ ಯರಗೇರಾ ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಸಂಚಾಲಕ ಮಹ್ಮದ್ ನಿಜಾಮುದ್ದೀನ್, ಬಸವರಾಜ ಹೂಗಾರ, ಕೆ.ಲಕ್ಷ್ಮೀಪತಿ, ಮಹೆಬೂಬ ಪಟೇಲ್, ಹರಿಶ್ಚಂದ್ರ ರೆಡ್ಡಿ, ಎಂ.ಈರಣ್ಣ ನಾಯಕ, ಕೆ.ನಲ್ಲಾರೆಡ್ಡಿ ನಾಯಕ, ಈ. ಸತ್ಯ ನಾರಾಯಣ ಶೆಟ್ಟಿ, ಕೆ.ಪರಸಪ್ಪ ನಾಯಕ, ವೆಂಕಟೇಶ ನಾಯಕ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು