ಯಶಸ್ವಿನಿ ಯೋಜನೆಗೆ ಮರುಜೀವ ನೀಡುವಂತೆ ರೈತರ ಒತ್ತಾಯ

7

ಯಶಸ್ವಿನಿ ಯೋಜನೆಗೆ ಮರುಜೀವ ನೀಡುವಂತೆ ರೈತರ ಒತ್ತಾಯ

Published:
Updated:
ದೇವನಹಳ್ಳಿಯಲ್ಲಿ ಯಶಸ್ವಿನಿ ನೆಟ್ ವರ್ಕ್ ಹೊಂದಿದ್ದ ರಾಮಯ್ಯ ಲೀನಾ ಆಸ್ಪತ್ರೆ

ವಿಜಯಪುರ: ಕೇಂದ್ರ ಸರ್ಕಾರದ ಜನ ಆರೋಗ್ಯ ಕಾರ್ಯಕ್ರಮಕ್ಕಿಂತಲೂ ರಾಜ್ಯದ ಯಶಸ್ವಿನಿ ಆರೋಗ್ಯ ಯೋಜನೆಯೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ನೀಡಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಆದರೆ ವಾಸ್ತವದಲ್ಲಿ ಈ ಯೋಜನೆ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಗ್ರಾಮೀಣ ಭಾಗದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮೀಣ ಭಾಗದ ರೈತರಿಗೆ ಯಶಸ್ವಿನಿ ಯೋಜನೆ ಹಳ್ಳ ಹಿಡಿಯುತ್ತಿರುವುದು ರೈತರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಪಿಎಲ್‌ಡಿ ಬ್ಯಾಂಕ್‌ಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ನೋಂದಾವಣಿ ಮಾಡಿಕೊಂಡಿದ್ದ ಲಕ್ಷಾಂತರ ಮಂದಿ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಗಳು ಹೆಚ್ಚಾಗಿದೆ.

2017–18ನೇ ಸಾಲಿನ ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣೆ ಯೋಜನೆಯೂ ಮೇ 31ಕ್ಕೆ ಮುಗಿದಿದ್ದು, ಪ್ರಸಕ್ತ ಸಾಲಿಗೆ ಹೆಸರು ನೋಂದಾಯಿಸಿಕೊಳ್ಳಲು, ನವೀಕರಣ ಮಾಡಿಸಿಕೊಳ್ಳು ಸರ್ಕಾರದ ವತಿಯಿಂದ ಈ ವರೆಗೂ ಆದೇಶ ಹೊರಬಂದಿಲ್ಲ.

ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣೆ ಯೋಜನೆಯಡಿ ಯಾವುದೇ ಸಹಕಾರ ಸಂಘ ಸಂಸ್ಥೆಗಳಲ್ಲೂ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿಲ್ಲ. ನವೀಕರಣವನ್ನೂ ಮಾಡುತ್ತಿಲ್ಲ. ಯಾವ ಆಸ್ಪತ್ರೆಗಳನ್ನು ಯೋಜನೆ ಅಡಿಯಲ್ಲಿ ಚಿಕಿತ್ಸಾ ಸೌಲಭ್ಯ ರಿಯಾಯಿತಿ ನೀಡಲು ನಿರಾಕರಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

2002ರಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೆ ತರಲಾಗಿತ್ತು. ಪ್ರತಿ ವರ್ಷ ಜೂನ್‌ 1ರಿಂದ ಈ ಯೋಜನೆ ಪ್ರಾರಂಭವಾಗಿ ಮೇ 31ಕ್ಕೆ ಅಂತ್ಯಗೊಳ್ಳುತಿತ್ತು. ಈ ಯೋಜನೆ ಪ್ರಯೋಜನ ಪಡೆಯಲು ಪ್ರತಿ ವರ್ಷ ಹೆಸರು ನೋಂದಯಿಸಿ ನವೀಕರಿಸಬೇಕಿತ್ತು. ಆದರೆ ಇನ್ನೂ ಸರ್ಕಾರದಿಂದ ಲಿಖಿತ ಆದೇಶ ಬರದ ಕಾರಣ ಕಾರ್ಯಾಂಗದ ಕಾರ್ಯವೈಖರಿಗೆ ರೈತಾಪಿ ವರ್ಗ ಅತೃಪರಾಗಿದ್ದಾರೆ.

ಹಾಲು ಉತ್ಪಾದಕರು, ಪಿ.ಎಲ್.ಡಿ. ಬ್ಯಾಂಕುಗಳ ಷೇರುದಾರರ ಕುಟುಂಬದವರು, ವ್ಯವಸಾಯ ಮಾರಾಟ ಉತ್ಪನ್ನಗಳ ಸಹಕಾರ ಸಂಘದ ಸದಸ್ಯರು, ತೋಟಗಾರಿಕೆ ಸಹಕಾರ ಸಂಘಗಳು, ಕುರಿ ಮತ್ತು ಕುರಿಉಣ್ಣೆ ಉತ್ಪನ್ನಗಳ ಸಂಸ್ಕರಣಾ ಸಹಕಾರ ಸಂಘಗಳು, ಬೀಡಿ ಕಾರ್ಮಿಕರು ಹಾಗೂ ನೇಕಾರರ ಸಹಕಾರ ಸಂಘಗಳ ಕುಲಶ ಕರ್ಮಿಗಳು, ಗುಡಿ ಕೈಗಾರಿಕೆ ಸಂಘಗಳ ಸದಸ್ಯರುಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ನೋಂದಾವಣಿಗೆ ಯಾರು ಅರ್ಹರು : ವಂತಿಗೆ ಎಷ್ಟು : ಸರ್ಕಾರ ಸೂಚಿಸಿ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ವ್ಯಕ್ತಿಯೂ ಅವರ ಕುಟುಂಬದ ಎಲ್ಲ ಸದಸ್ಯರಿಗೂ ಈ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿ ಆರೋಗ್ಯ ಭದ್ರತೆ ಪಡೆಯಬಹುದಿತ್ತು. ವಾರ್ಷಿಕವಾಗಿ ಒಬ್ಬರಿಗೆ ₹ 300 ನಿಗದಿಪಡಿಸಿಲಾಗಿದ್ದು, ಇದರಲ್ಲಿ ₹240 ಫಲಾನುಭವಿಗಳು ತುಂಬಿದರೇ ಉಳಿದ ₹60 ಹಾಲು ಒಕ್ಕೂಟವೇ ಪಾವತಿಸುತ್ತಿತ್ತು.

ಒಂದೇ ಕುಟುಂಬದಲ್ಲಿ 5ಕ್ಕಿಂತ ಹೆಚ್ಚು ಮಂದಿ ಈ ಯೋಜನೆಯ ಫಲಾನುಭವಿಗಳಾದರೆ ₹15 ರಿಯಾಯಿತಿ ನೀಡಲಾಗುತ್ತಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿತ್ತು, ಅವರು ಯಾವುದೇ ಹಣ ಪಾವತಿ ಮಾಡದೇ ಯೋಜನೆಯ ಫಲಾನುಭವಿಗಳಾಗಬಹುದಿತ್ತು.

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 33,789ಕ್ಕೂ ಹೆಚ್ಚು ಮಂದಿ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರು. ಪ್ರತಿ ವರ್ಷವು ನೋಂದಾಯಿಸಿಕೊಳ್ಳುತ್ತಿದ್ದ ಸದಸ್ಯರ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಗ್ರಾಮಾಂತರ ಜಿಲ್ಲೆಯಲ್ಲಿ ತಾಲ್ಲೂಕು ಪ್ರಥಮದಲ್ಲಿತ್ತು ಎಂದು ಬಮೂಲ್‌ನ ಉಪವ್ಯವಸ್ಥಾಪಕ ಗಂಗಯ್ಯ ತಿಳಿಸಿದರು.

‘ಸಾಲ ಮಾಡಿ ಮಗಳನ್ನು ಉಳಿಸಿಕೊಂಡಿದ್ದೇನೆ’

ಯೋಜನೆಯಿಂದ ವಂಚಿತರಾದ ಶಾಮಣ್ಣ ಅವರು ಮಾತನಾಡಿ, ‘ನನ್ನ ಮಗಳಿಗೆ ಜ್ಯಾಂಡೀಸ್‌ ಆಗಿದೆ. ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಯಶಸ್ವಿ ಯೋಜನೆಯನ್ನೇ ನಂಬಿ ಆಸ್ಪತ್ರೆಗೆ ಹೋಗಿದ್ವಿ. ಆಸ್ಪತ್ರೆಯಲ್ಲಿ ಯಶಸ್ವಿನಿ ಚಾಲ್ತಿಯಲ್ಲಿ ಇಲ್ಲ ಎಂದು ವೈದ್ಯರು ಹೇಳಿದರು. ಏನು ಮಾಡಬೇಕು ಎಂದು ದಿಕ್ಕು ತೋಚಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಪ್ರತಿದಿನ ಕೂಲಿ ಮಾಡಿ ಜೀವನ ಸಾಗಿಸುವ ನಾವು, ಮಗಳನ್ನು ಉಳಿಸಿಕೊಳ್ಳಲು ಸಾವಿರಾರು ರೂಪಾಯಿ ಸಾಲ ಮಾಡಿಕೊಂಡಿದ್ದೀವಿ. ಈಗ ಅದನ್ನು ಹೇಗೆ ತೀರಿಸಬೇಕು ಎನ್ನು ಚಿಂತೆ ಕಾಡುತ್ತಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

–ಎಂ.ಮುನಿನಾರಾಯಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !