ವರ್ಷಾಂತ್ಯಕ್ಕೆ ಬಯಲು ಶೌಚ ಮುಕ್ತ ಜಿಲ್ಲೆ: ಡಿಸಿ

7
ಮತ್ತೆ ಆರಂಭವಾದ ಜನಸ್ಪಂದನ ಸಭೆ; ಹರಿದು ಬಂದ ದೂರುಗಳ ಮಹಾಪೂರ

ವರ್ಷಾಂತ್ಯಕ್ಕೆ ಬಯಲು ಶೌಚ ಮುಕ್ತ ಜಿಲ್ಲೆ: ಡಿಸಿ

Published:
Updated:
ರಾಯಚೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು

ರಾಯಚೂರು: ಸ್ವಚ್ಚ ಭಾರತ ಯೋಜನೆ (ಎಸ್‌ಬಿಎಂ)ಯಲ್ಲಿ ರಾಯಚೂರು ಜಿಲ್ಲೆಯ ಸಾಧನೆ ಇಡೀ ದೇಶದಲ್ಲಿಯೆ ಕಳಪೆಯಾಗಿದೆ. ಇದೀಗ ಅಧಿಕಾರಿಗಳ ಸಭೆ ಮಾಡಲಾಗಿದ್ದು, ತ್ವರಿತಗತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸೂಚಿಸಲಾಗಿದೆ. ವರ್ಷಾಂತ್ಯಕ್ಕೆ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಯಚೂರು ನಗರದಲ್ಲಿ ಇನ್ನೂ 6,666 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಜಿಲ್ಲೆಯಲ್ಲಿ 10,600 ಶೌಚಾಲಯಗಳ ನಿರ್ಮಾಣ ಬಾಕಿ ಇದೆ. ನಗರದಲ್ಲಿ ಪ್ರತಿ ವಾರ್ಡ್‌ಗೆ ಒಬ್ಬ ಸಿಬ್ಬಂದಿ ನಿಯೋಜಿಸಿ ಕೆಲಸ ಮಾಡಿಸಲಾಗುತ್ತಿದ್ದು, ಪ್ರತಿದಿನವೂ ಪ್ರಗತಿ ವರದಿ ನೀಡುವಂತೆ ತಿಳಿಸಲಾಗಿದೆ. ಅದೇ ರೀತಿ ಗ್ರಾಮ ಮಟ್ಟದಲ್ಲಿಯೂ ಸ್ವಚ್ಚ ಭಾರತ ಯೋಜನೆಯಡಿ ಶೌಚಾಲಯಗಳ ನಿರ್ಮಾಣ ಕೈಗೊಳ್ಳುವಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ, ಸೂಚನೆಯನ್ನು ಪಾಲನೆ ಮಾಡದ ಸರ್ಕಾರಿ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ರಾಯಚೂರು ನಗರಸಭೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮವಾಗಿದೆ. ಇದೊಂದು ನಿದರ್ಶನವನ್ನು ಗಮನಿಸಿ, ಎಲ್ಲ ಅಧಿಕಾರಿಗಳು ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಸ್ವಚ್ಚ ಭಾರತ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಗೆ ₨40 ಕೋಟಿ ಅನುದಾನ ಜಮಾಗೊಂಡಿದೆ ಎಂದು ತಿಳಿಸಿದರು.

ಎಚ್‌ಕೆಆರ್‌ಡಿಬಿ ಅನುದಾನ: ವಿಧಾನಸಭೆ ಚುನಾವಣೆ ಅವಧಿಯಲ್ಲಿ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನ ವೆಚ್ಚವಾಗಿರಲಿಲ್ಲ. ₨6.26 ಕೋಟಿ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ ₨2.58 ಕೋಟಿ ವೆಚ್ಚವಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಕಾಮಗಾರಿಗಳನ್ನು ವಹಿಸಿಕೊಂಡಿದ್ದ ಕೆಆರ್‌ಎಡಿಎಲ್‌ಗೆ ₨5 ಕೋಟಿ ಅನುದಾನ ಲಭ್ಯವಾಗಿದೆ. ಶೀಘ್ರದಲ್ಲೆ ಕಾಮಗಾರಿಗಳೆಲ್ಲ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ₨ 41 ಕೋಟಿ ಅನುದಾನ ಬಾಕಿ ಇದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಈಗ ಬಹಳ ಕೆಲಸ ವಹಿಸಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಸದ್ಯ 46 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಕೆಲವೆ ದಿನಗಳಲ್ಲಿ ನೀರಿನ ಪ್ರಮಾಣ ಅಗಾಧವಾಗಿ ಏರಿಕೆಯಾಗುವ ನಿರೀಕ್ಷೆ ಇದೆ. ನೀರಿನ ಮಟ್ಟವು 76 ಟಿಎಂಸಿಗೆ ಏರಿಕೆಯಾದರೆ, ಒಂದು ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಶೇ 20 ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಇದರಿಂದ ಹೆಸರು ಮತ್ತು ಉದ್ದು ಬೆಳೆಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಸಲ ತೊಗರಿ ಬಿತ್ತನೆ ಕೂಡಾ ಕಡಿಮೆಯಾಗಲಿದೆ ಎಂದು ರೈತರು ಹೇಳಿದ್ದಾರೆ. ಬಹುತೇಕ ರೈತರು ಹತ್ತಿ ಬೆಳೆ ಬೆಳೆಯುತ್ತಾರೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !