ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರಿಗೆ ಯೋಗ

ಯೋಗ ಗುರು ಅನ್ನದಾನಯ್ಯ ಸ್ವಾಮಿ ಸೇವಾಕಾರ್ಯಕ್ಕೆ ಮೆಚ್ಚುಗೆ
Last Updated 23 ಸೆಪ್ಟೆಂಬರ್ 2020, 3:40 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಲ್ಲಿ ಚೈತನ್ಯ, ಮನೋಸ್ಥೈರ್ಯ ಹೆಚ್ಚಿಸಲು ಯೋಗ ತರಬೇತಿ ಆರಂಭಿಸಲಾಗಿದೆ. ತಹಶೀಲ್ದಾರ್ ಅಮರೇಶ ಬಿರಾದಾರ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಸೋಂಕಿತರಿಗೆ ಯೋಗ ತರಬೇತಿ ಕುರಿತು ವಿಶೇಷ ಆಸಕ್ತಿವಹಿಸಿದ್ದು ಉತ್ತಮ ಸ್ಪಂದನೆ ದೊರೆತಿದೆ.

ಮಾನ್ವಿ ಪಟ್ಟಣದ ಯೋಗ ಸನ್ನಿಧಿ ವಿದ್ಯಾಪೀಠ ಟ್ರಸ್ಟ್‌ನ ರೂವಾರಿ ಅನ್ನದಾನಯ್ಯ ಸ್ವಾಮಿ ಕೊರೊನಾ ಸೋಂಕಿತರಿಗೆ ಯೋಗ ತರಬೇತಿ ನೀಡಲು ಮುಂದಾಗಿದ್ದಾರೆ. ಯೋಗ ವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವೀಧರರಾಗಿರುವ ಅನ್ನದಾನಯ್ಯ ಸ್ವಾಮಿ ಮಾನ್ವಿ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಯೋಗ ತರಬೇತಿ ನೀಡುವ ಮೂಲಕ ಯೋಗಗುರು ಎಂದು ಹೆಸರಾಗಿದ್ದಾರೆ.

ಮುಷ್ಟೂರು ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಸೆ.18ರಿಂದ ಪ್ರತಿ ದಿನ ಸಂಜೆ 5.30ರಿಂದ 6.30ರವರೆಗೆ ಯೋಗ ತರಬೇತಿ ನೀಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರದ ಮುಂಭಾಗದಲ್ಲಿರುವ ಮೈದಾನದಲ್ಲಿ ಸೋಂಕಿತರ ನಡುವೆ ಪರಸ್ಪರ ಅಂತರ ಕಾಯ್ದುಕೊಂಡು ಯೋಗಾಸನ ಭಂಗಿಗಳ ನಿರ್ವಹಣೆ ಕುರಿತು ತಿಳಿಸಲಾಗುತ್ತಿದೆ. ಪ್ರಾಣಯಾಮ, ವೀರಭದ್ರಾಸನ, ಅಧೋಮುಖ ಶ್ವಾನಾಸನ, ಅರ್ಧ ಚಕ್ರಾಸನ, ತಾಡಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ಕಲಿಸಿಕೊಡಲಾಗುತ್ತಿದೆ. ದೈನಂದಿನ ಬದುಕಿಗೆ ಆರೋಗ್ಯ ಹಾಗೂ ಯೋಗದ ಮಹತ್ವದ ಕುರಿತು ಸೋಂಕಿತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಯೋಗ ತರಬೇತಿ ಕುರಿತು ಕೊರೊನಾ ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಪ್ರತಿ ದಿನ ಯೋಗಾಸನಗಳನ್ನು ಮಾಡುವುದರಿಂದ ಕೋವಿಡ್ ಕುರಿತು ಹೊಂದಿದ್ದ ಆತಂಕ, ಒತ್ತಡ ನಿವಾರಣೆಯಾಗಿವೆ. ಮಾನಸಿಕವಾಗಿ ನಿರಾಳತೆಯ ಭಾವನೆ ಮೂಡಿದೆ’ ಎಂದು ಸೋಂಕಿತ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಈ ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಾಗುವವರ
ಸಂಖ್ಯೆ ಸರಾಸರಿ 25 ಇದೆ.

ಕೇಂದ್ರದಲ್ಲಿ 14 ದಿನಗಳವರೆಗೆ ಇರುವ ಎಲ್ಲಾ ಸೋಂಕಿತರಿಗೆ ಪ್ರತಿ ದಿನ ಯೋಗ ತರಬೇತಿ ನೀಡಲಾಗುವುದು ಎಂದು ತಹಶೀಲ್ದಾರ್ ಅಮರೇಶ ಬಿರಾದಾರ ತಿಳಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಯೋಗ ತರಬೇತಿ ನೀಡುತ್ತಿರುವ ಯೋಗಗುರು ಅನ್ನದಾನಯ್ಯ ಸ್ವಾಮಿ ಅವರ ಸೇವಾಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT