ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೆಂಟರ್‌ಗೆ ಸೋಂಕಿತರ ಸೇರ್ಪಡೆಗೆ ಕ್ರಮ: ಶೇಖ್ ತನ್ವೀರ್ ಆಸೀಫ್

ವಿವಿಧ ಗ್ರಾಮಗಳಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಜಿಪಂ ಸಿಇಒ
Last Updated 26 ಮೇ 2021, 16:03 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕಿನ ಸರಪಳಿಯನ್ನು ಕಡಿತಮಾಡಲು ಎಲ್ಲಾ ಗ್ರಾಮಗಳಲ್ಲಿಯೂ ಸೋಂಕಿತರನ್ನು ಪತ್ತೆ ಹಚ್ಚಿ, ಅವರನ್ನು ಆಯಾ ತಾಲ್ಲೂಕುಗಳಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಆರೋಗ್ಯ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಮನೆ ಮನೆ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಹೇಳಿದರು.

ಸಿರವಾರ ತಾಲ್ಲೂಕಿನ ಚಾಗಭಾವಿ ಹಾಗೂ ಚಾಗಭಾವಿ ಕ್ಯಾಂಪ್‌ಗೆ ಬುಧವಾರ ಭೇಟಿ ನೀಡಿ, ಮನೆಮನೆ ಸಮೀಕ್ಷೆ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿ ಮಾತನಾಡಿದರು.

ಕೆಮ್ಮು, ಜ್ವರ, ನೆಗಡಿ, ತಲೆನೋವು, ವಾಂತಿ ಬೇಧಿ ಸೇರಿದಂತೆ ಇತರೆ ಅನಾರೋಗ್ಯ ಲಕ್ಷಣ ಇರುವವರು ಕೂಡಲೇ ಕೋವಿಡ್ ತಪಾಸಣೆಗೆ ಒಳಪಡಬೇಕು. ಮನೆ ಮನೆ ಸಮೀಕ್ಷೆ ವೇಳೆ ಬರುವ ಆರೋಗ್ಯ ಇಲಾಖೆ ಸಿಬ್ಬಂದಿ, ಮನೆಯಲ್ಲಿ ಅನಾರೋಗ್ಯದ ಲಕ್ಷಣವುಳ್ಳವರ ಮೂಗಿನ ದ್ರವ ಪಡೆದು, ತಪಾಸಣೆಗೆ ಕಳುಹಿಸುವರು. ಅದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಕೋರಿದರು.

ಸೋಂಕಿತರು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಬೇಕು. ಅದಕ್ಕಾಗಿ ವಾಹನಗಳನ್ನು ಸಹ ಒದಗಿಸಲಾಗಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಉತ್ತಮ ಊಟ, ಉಪಹಾರ, ಔಷಧೋಪಚಾರಗಳನ್ನು ನೀಡಲಾಗುವುದು. ಅಲ್ಲಿ ಗುಣಮುಖರಾದ ನಂತರ ಪುನಃ ಗ್ರಾಮಕ್ಕೆ ಮರಳಲು ವಾಹನದ ವ್ಯವಸ್ಥೆಯನ್ನು ಸಹ ಮಾಡಿಕೊಡಲಾಗುವುದು. ಗ್ರಾಮಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಮರೆಯಬಾರದು ಎಂದು ಗ್ರಾಮಸ್ಥರಲ್ಲಿ ಜಗೃತಿ ಮೂಡಿಸಿದರು.

ಸಿರವಾರ ತಾಲ್ಲೂಕಿನ ನವಕಲ್‌ನ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭಿಸಿದ್ದು, ಅಲ್ಲಿಗೆ ಭೇಟಿ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೋವಿಡ್ ಸೋಂಕಿತರಿಗೆ ಅಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ, ದಾಖಲಾಗುವ ರೋಗಿಗಳಿಗೆ ಉತ್ತಮ ಆಹಾರ, ಕುಡಿಯುವ ನೀರು, ಔಷಧೋಪಚಾರ ನೀಡುವಂತೆ ಸೂಚಿಸಿದರು. ಅಲ್ಲಿ 5 ಮಂದಿ ರೋಗಿಗಳನ್ನು ದಾಖಲಿಸಲಾಗಿತ್ತು.

ಇದಕ್ಕೂ ಮೊದಲು ರಾಯಚೂರು ತಾಲ್ಲೂಕಿನ ಚಿಕ್ಕಸುಗೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT