ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಆಸ್ಪತ್ರೆಗಳಿಗೆ ಸೊಳ್ಳೆ ಪರದೆ ಕೊಡಿ’

ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 22 ಜುಲೈ 2019, 10:08 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿರುವುದರಿಂದ ಸೊಳ್ಳೆ ಕಾಟ ವಿಪರೀತವಾಗಿದ್ದು, ಕೂಡಲೇ ಸರ್ಕಾರಿ ಆಸ್ಪತ್ರೆಗಳಿಗೆ ಸೊಳ್ಳೆ ಪರದೆಗಳನ್ನು ಒದಗಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಂಧನೂರು ತಾಲ್ಲೂಕಿನ ಗಾಂಧಿ ನಗರದಲ್ಲಿ ನನೆಗುದಿಗೆ ಬಿದ್ದಿರುವ ಪೈಪ್‌ಲೈನ್ ಕಾಮಗಾರಿ ಶಿಘ್ರ ಮುಗಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡರ ಮಾತನಾಡಿ, ನಿರ್ಮಿತಿ ಕೇಂದ್ರದವರು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಶೌಚಾಲಯಕ್ಕೆ ಅನುದಾನ ಅಲ್ಪ ಪ್ರಮಾಣದಲ್ಲಿರುವುದು ಈ ನಿರ್ಲಕ್ಷ್ಯಕ್ಕೆ ಕಾರಣ ಎಂದು ಆರೋಪಿಸಿದರು.

ಸಿಂಧನೂರಿನಲ್ಲಿ ಕ್ಯಾಷುಟೆಕ್ ನಿರ್ಮಿಸಿದ ಶಾಲಾ ಕಟ್ಟಡ ಸಂಪೂರ್ಣ ಕಳಪೆಯಾಗಿದೆ. ಒಂದು ವರ್ಷ ಕೂಡಾ ಕಟ್ಟಡ ಬಾಳಿಕೆ ಬರುವುದಿಲ್ಲ. ಕನಿಷ್ಠ ಪಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಕೋಣೆಗಳನ್ನು ನಿರ್ಮಿಸಬೇಕು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಏನು ಅನುಕೂಲಗಳಿವೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪ್ರಚಾರ ಮಾಡುತ್ತಿಲ್ಲ. ಕಾಲುವೆ ಭಾಗದ ರೈತರು ಬಹುತೇಕ ಭತ್ತಕ್ಕೆ ಪರ್ಯಾಯ ಬೆಳೆಯಲು ಮುಂದಾಗುತ್ತಿದ್ದಾರೆ. ಇಂತಹ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯವರು ಬಾಗಲಕೋಟ ತೋಟಗಾರಿಕೆ ವಿವಿಯಿಂದಲೆ ಸಸಿಗಳನ್ನು ಪಡೆಯಬೇಕು. ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ತರಿಸಿಕೊಳ್ಳುವ ಸಸಿಗಳಿಗೆ ಬೇರು ಮಟ್ಟದಲ್ಲಿ ರೋಗಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಆಗುವ ನಷ್ಟ ತಪ್ಪಿಸಬೇಕಿದೆ ಎಂದು ತಿಳಿಸಿದರು.

ದೇವರಾಜು ಅರಸು ನಿಗಮದಡಿ ಗಂಗಾ ಕಲ್ಯಾಣ ಯೋಜನೆಗಾಗಿ ಕೊರೆಸಿದ ಕೊಳವೆ ಬಾವಿಯಿಂದ ನೀರು ಲಭ್ಯ ಆಗುತ್ತಿಲ್ಲ. ವಿದ್ಯುತ್ ಸರಬರಾಜು ಮತ್ತು ಇತರೆ ಪರಿಕರಗಳ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ. ರೈತರ ಮನೆ ಒಂದು ಗ್ರಾಮದಲ್ಲಿ ಹಾಗೂ ಜಮೀನು ಒಂದು ಗ್ರಾಮದಲ್ಲಿ ಇದ್ದರೆ, ಯಾವ ವಿಳಾಸದಲ್ಲಿ ಸಾಲ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ರೈತರು ಗೊಂದಲದಲ್ಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಖುದ್ದಾಗಿ ಆದ್ಯತೆ ವಹಿಸುತ್ತಿದ್ದೇನೆ. ನಿವೇಶನ ಹಾಗೂ ಇತರೆ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಫಾಗಿಂಗ್ ಯಂತ್ರ ಖರೀದಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಕ್ಯಾಷುಟೆಕ್ ಎಂಜಿನಿಯರುಗಳು ಮಾಹಿತಿ ನೀಡಿ, ಕಳಪೆ ಕಾಮಗಾರಿ ಆರೋಪದ ಬಗ್ಗ ಸೂಕ್ತ ತನಿಖೆಯಾಬೇಕು. ಈ ಮೂರನೇ ವ್ಯಕ್ತಿ ವರದಿ ಆಧರಿಸಿ ಬಿಲ್ ಪಾವತಿಸಲಾಗುವುದು. ಶಾಲಾ ಕಟ್ಟಡ ಕಳಪೆಯಾದರೆ ಹಣ ನೀಡುವುದಿಲ್ಲ ಎಂದರು.

ಜಿಲ್ಲಾ ಆರೋಗ್ಯ ಇಲಾಖೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆಯಲಾಗಿತ್ತು. 24/7 ಆರಂಭವಾದ ಬಳಿಕ ಶಾಶ್ವತ ನೀರಿನ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದಾರೆ. ಸದ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದರು..

ಜಿಲ್ಲೆಯಲ್ಲಿ ಡೆಂಗಿ 19 ಪ್ರಕರಣಗಳು ಕಂಡುಬಂದಿವೆ. ಸಿಂಧನೂರಿನಲ್ಲಿ ಯಾವುದೇ ಡೆಂಗಿ ಪ್ರಕರಣ ಕಂಡುಬಂದಿಲ್ಲ.

442 ನಮೂನೆಗಳನ್ನು ತಪಾಸಣೆ ಮಾಡಲಾಗಿದೆ.27 ಫಾಗಿಂಗ್ ಯಂತ್ರ ನಮ್ಮ ಬಳಿ ಇದೆ. ಎಚ್1ಎನ್1 ಶಂಕಿತ ಪ್ರಕರಣಗಳು ಕಂಡುಬಂದ ಕಡೆಗಳಲ್ಲಿ ಮಾತ್ರ ಫಾಗಿಂಗ್ ಮಾಡಿಸುತ್ತೇವೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ, 2018-19 ನೇ ಸಾಲಿನಲ್ಲಿ 2041 ಕೃಷಿ ಹೊಂಡ ನಿರ್ಮಾಣ ಗುರಿಯಿತ್ತು. ಅದರಲ್ಲಿ 1,391 ಕೃಷಿ ಹೊಂಡಗಳಿಗೆ ಮಾತ್ರ ಅನುದಾನ ಬಂದಿತ್ತು. ಅದನ್ನು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮೊಹ್ಮದ್‌ ಅಲಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ 10.28 ಲಕ್ಷ ಸಸಿಗಳ ವಿತರಣೆ ಹಾಗೂ ನಾಟಿ ಗುರಿ ಇದೆ. ಹನಿ ನೀರಾವರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಯೋಜನೆಗಳಲು ಪ್ರಗತಿಯಲ್ಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT