ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ₹300 ಕೋಟಿ ಅನುದಾನ’

Last Updated 11 ಆಗಸ್ಟ್ 2020, 12:58 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಈಗಾಗಲೇ ₹25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾರ್ಯಚಟುವಟಿಕೆಗಳನ್ನು ಆರಂಭಿಸಿದ ಮೇಲೆ ಇನ್ನೂ ₹300 ಕೋಟಿ ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಮಂಡಳಿಯ ನಿರ್ದೇಶಕ ಜಗನ್ನಾಥ ಕುಲಕರ್ಣಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಠಿಬದ್ಧವಾಗಿವೆ. ಬ್ರಾಹ್ಮಣರಿಗೂ ಜಾತಿ, ಆದಾಯ ಪ್ರಮಾಣಪತ್ರ ಒದಗಿಸಲು ಈಗಾಗಲೇ ಆದೇಶ ಹೊರಡಿಸಿರುವುದು ಸಂತಸ ಮೂಡಿಸಿದೆ. ಆರ್ಥಿಕವಾಗಿ ಹಿಂದುಳಿದ ದೇಶದ 144 ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಒದಗಿಸಲು ಕೇಂದ್ರ ಸರ್ಕಾರ ಮಸೂದೆ ಪಾಸ್‌ ಮಾಡಿದೆ ಎಂದು ತಿಳಿಸಿದರು.

ಸರ್ಕಾರದಿಂದ ಮಂಡಳಿಗೆ ಬರುವ ಅನುದಾನವನ್ನು ಪ್ರತಿ ಜಿಲ್ಲೆಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವ ಬಗ್ಗೆ ಮಂಡಳಿಯ ಪ್ರಥಮ ಸಭೆಯಲ್ಲಿ ಚರ್ಚಿಸಲಾಗಿದೆ. ಬ್ರಾಹ್ಮಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಆಗುವುದಕ್ಕೆ ವಿವಿಧ ರೀತಿಯ 11 ಯೋಜನೆಗಳನ್ನು ಮಾಡಲಾಗಿದೆ ಎಂದರು.

ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರಾಜ್ಯದ ಎಲ್ಲ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಶಿಷ್ಯವೇತನ ಹಂಚಲಾಗುವುದು. ಅರ್ಹ ಬ್ರಾಹ್ಮಣರಿಗೆ ಕಡಿಮೆ ವೆಚ್ಚದ ಮನೆಗಳು, ವೈದ್ಯಕೀಯ ಸಹಾಯ, ಪ್ರತಿ ಜಿಲ್ಲೆಯಲ್ಲೂ ಸಹಾಯ ಕೇಂದ್ರ, ನಿರ್ಗತಿಕ ಬ್ರಾಹ್ಮಣರ ಅಂತ್ಯಕ್ರಿಯೆಗೆ ನೆರವು ಸೇರಿ ಸರ್ವತೋಮುಖ ಅಭಿವೃದ್ಧಿಗಾಗಿ ಮಂಡಳಿಯು ಯೋಜನೆ ರೂಪಿಸಿದೆ ಎಂದು ಹೇಳಿದರು.

ಕೆ.ಡಿ.ಮುರುಳಿಧರ್‌, ಗುರುರಾಜಾಚಾರ್ಯ, ಪ್ರಸನ್ನ ಅಲಂಪಲ್ಲಿ, ಗೋಪಾಲಕೃಷ್ಣ, ಪವನ ಜಹಾಗೀರದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT