ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಿಂದ ಜಿಲ್ಲೆಯಲ್ಲಿ ₹322 ಕೋಟಿ ಹಾನಿ 

ಸಚಿವದ್ವಯರಿಂದ ಪ್ರವಾಹ ಅವಲೋಕನ ಸಭೆ, ತುರ್ತು ಕ್ರಮಕ್ಕೆ ಸೂಚನೆ
Last Updated 21 ಆಗಸ್ಟ್ 2019, 13:55 IST
ಅಕ್ಷರ ಗಾತ್ರ

ರಾಯಚೂರು: ನೂತನವಾಗಿ ಸಚಿವ ಸ್ಥಾನದ ಜವಾವ್ದಾರಿ ವಹಿಸಿಕೊಂಡಿರುವ ಶ್ರೀರಾಮುಲು ಹಾಗೂ ಪ್ರಭು ಚವಾಣ ಅವರು, ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಬುಧವಾರ ಆಯೋಜಿಸಿ ಪ್ರವಾಹ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದರು. ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ತುರ್ತು ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ದೇಶನದಂತೆ ನಾನು ರಾಯಚೂರು, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರವಾಹ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ನದಿತೀರಗಳಲ್ಲಿ ಮುಳುಗಡೆಯಾಗಿದ್ದ ಮನೆಗಳಿಗೆ ಜನರು ಮತ್ತೆ ಹೋಗಿದ್ದಾರೆ. ಸಾಧ್ಯವಾದರೆ ಅದೇ ಮನೆಗಳನ್ನು ಆಶ್ರಯ ಮನೆಗಳೆಂದು ಪರಿಗಣಿಸಿ ₹ 50 ಸಾವಿರ ಪರಿಹಾರ ಅನುದಾನ ಒದಗಿಸಬೇಕು‌. ಆಶ್ರಯ ಮನೆಗಳನ್ನು ನಿರ್ಮಿಸಿರುವ ಕಡೆಗಳಲ್ಲಿ ದುರಸ್ತಿ ಮಾಡಿಸಿಕೊಟ್ಟು ಇರುವುದಕ್ಕೆ ವ್ಯವಸ್ಥೆ ಮಾಡಬೇಕು. ಯಾವುದೇ ಹಳೇ ಅನುದಾನಕ್ಕಾಗಿ ಕಾದು ಕುಳಿತುಕೊಳ್ಳಬಾರದು. ಸರ್ಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ. ಅಧಿಕಾರಿಗಳನ್ನು ಸಾಧಕ, ಬಾಧಕ ಯೋಜಿಸಿಕೊಂಡು ತುರ್ತು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

ರಾಯಚೂರು ಜಿಲ್ಲೆಯ 72 ನದಿತೀರದ ಗ್ರಾಮಗಳಲ್ಲಿ ಒಟ್ಟು ₹322 ಕೋಟಿ ನಷ್ಟವಾಗಿದೆ. ಆದರೆ, ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಅದು ₹58 ಕೋಟಿ ಮಾತ್ರ ಆಗುತ್ತದೆ. ಈ ವ್ಯತ್ಯಾಸವನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕ್ರಮ ವಹಿಸುವ ಬಗ್ಗೆ ಮುಖ್ಯಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಬೆಳೆಹಾನಿ ಅನುಭವಿಸಿದ ರೈತರಿಗೆ ಮತ್ತು ಮನೆಹಾನಿ ಉಂಟಾದವರಿಗೆ ಯುದ್ದೋಪಾದಿಯಲ್ಲಿ ಪರಿಹಾರ ಹಂಚುವ ಕೆಲಸ ಮಾಡಬೇಕು. ವಿಮಾ ಕಂಪನಿಗಳಿಂದಲೂ ಬೆಳೆಹಾನಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಬೇಕು. ಪಂಪ್‌ಸೆಟ್ ಮುಳುಗಡೆಯಿಂದ ಬೆಳೆಹಾನಿ ಅನುಭವಿಸಿದ ರೈತರ ಬೆಳೆಗಳನ್ನು ಹಾನಿಯಲ್ಲಿ ಸೇರಿಸಬೇಕು. ಮತ್ತೆ ಈ ಬಗ್ಗೆ ಸಮೀಕ್ಷೆ ಕೈಗೊಂಡು ರೈತರಿಗೆ ಅಗತ್ಯ ನೆರವು ನೀಡಬೇಕು ಎಂದು ಕೋರಿದರು.

ಮುಖ್ಯವಾಗಿ ಸುಟ್ಟುಹೋಗಿರುವ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲು ಜೆಸ್ಕಾಂ ಮುಂದಾಗಬೇಕು. 10 ಗಂಟೆ ವಿದ್ಯುತ್‌ ಪೂರೈಕೆಯಾದರೆ ಮಾತ್ರ ಬೆಳೆಗಳು ಉಳಿಯುತ್ತವೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಮಾತನಾಡಿ, ನದಿ ತೀರದಲ್ಲಿ ಸುಮಾರು ಅರ್ಧ ಕಿಲೋಮೀಟರ್ ವರೆಗೂ ಮಾತ್ರ ಪ್ರವಾಹವು ಆವರಿಸಿಕೊಂಡಿತ್ತು. ಆದರೆ, ನದಿಯಿಂದ ಪೈಪ್‌ಲೈನ್ ಮಾಡಿಕೊಂಡಿರುವ ನದಿಯಿಂದ ಸುಮಾರು 3 ಕಿಲೋ ಮೀಟರ್ ದೂರದವರೆಗಿನ ರೈತರ ಬೆಳೆಗಳು ಕೂಡಾ ಹಾನಿಯಾಗಿವೆ. ಇಂಥ ರೈತರಿಗೂ ನೆರವು ನೀಡಬೇಕು. ಗೂಗಲ್‌ ಬ್ಯಾರೇಜ್ ಗೇಟ್ ನಿರ್ವಹಣೆ ಮಾಡುವುದಕ್ಕೆ ನೀರಾವರಿ ಇಲಾಖೆಯಲ್ಲಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಗೂಗಲ್ ಬ್ರಿಡ್ಜ್ ಗೇಟ್ ಪ್ರತಿವರ್ಷ ನಿರ್ಹವಣೆ ಮಾಡದೆ ಇರುವುದಕ್ಕಾಗಿ 20 ಗೇಟ್‌ಳನ್ನು ತೆರೆಯುವುದಕ್ಕೆ ಹರಸಾಹಸ ಮಾಡಬೇಕಾಯಿತು. ಜಿಲ್ಲಾಧಿಕಾರಿಗಳು ಕೂಡಲೇ ಗೇಟ್ ಹಾಕಿಸುವ ಕೆಲಸಕ್ಕಾಗಿ ಅನುದಾನ ಒದಗಿಸಬೇಕು ಎಂದು ಹೇಳಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ನರೇಗಾ ಉದ್ಯೋಗದ ದಿನಗಳನ್ನು 100 ರಿಂದ 150 ದಿನಕ್ಕೆ ಏರಿಕೆ ಮಾಡಬೇಕು. ಬರಗಾಲದಿಂದ ತೊಂದರೆ ಅನುಭವಿಸುತ್ತಿರುವ ಜನಕ್ಕೆ ಅನುಕೂಲ ಮಾಡಬೇಕು ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಪ್ರವಾಹ ಪೀಡಿತ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಆಹಾರಧಾನ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಮಾತನಾಡಿ, ಪ್ರವಾಹ ಇದ್ದಾಗ ತೆಗೆದುಕೊಂಡಿದ್ದ ಎಚ್ಚರಿಕೆಯನ್ನು ಜೆಸ್ಕಾಂ ಎಂಜಿನಿಯರುಗಳು ಈಗಲೂ ತೆಗೆದುಕೊಂಡು ಟ್ರಾನ್ಸ್ ಫಾರ್ಮರ್ ಅಳವಡಿಸಬೇಕು. ಪ್ರತಿದಿನ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಲಭ್ಯವಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಸಂತ್ರಸ್ತರನ್ನು ಆಶ್ರಯ ಮನೆಗಳಿಗೆ ಸೇರಿಸುವ ಕೆಲಸವನ್ನು ಎಸಿ, ಡಿಸಿ ಮಾಡಬೇಕು. ಈ ಬಗ್ಗೆ ಸಚಿವರ ನಿರ್ದೇಶನ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.

ಆಸರೆ ಮನೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಈ ಹಿಂದೆ ಪಂಚಾಯತ್ ರಾಜ್ ಇಲಾಖೆಗೆ ಈ ಹಿಂದೆ ಬಿಡುಗಡೆಯಾಗಿದ್ದ ₹ 12 ಕೋಟಿ ವಾಪಸ್ ಪಡೆದು, ಜಿಲ್ಲಾಡಳಿತಕ್ಕೆ ಒದಗಿಸುವ ಬಗ್ಗೆ ಸಚಿವರು ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಿದ್ದಾರೆ. ಕೂಡಲೇ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದೂರ ಮಾತನಾಡಿ, ಪ್ರವಾಹ ಪೀಡಿತ ಗ್ರಾಮಗಳ 161 ಮಕ್ಕಳಿಗೆ ಮತ್ತೆ ಪಠ್ಯಪುಸ್ತಕ ಒದಗಿಸಲಾಗಿದೆ. 13 ಶಾಲಾಕೋಣೆಗಳು ಹಾನಿಯಾದ ಬಗ್ಗೆ ಪ್ರಸ್ತಾವನೆ ನೀಡಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ, ನೀರಿನಲ್ಲಿಯೇ ಬೆಳೆಯುವ ಭತ್ತ ಮತ್ತು ಕಬ್ಬು ಪ್ರವಾಹದಲ್ಲಿ ಮುಳುಗಡೆಯಾದರೆ ವಿಮಾ ಪರಿಹಾರ ಕೊಡುವ ಅವಕಾಶ ನಿಯಮಗಳಲ್ಲಿ ಇಲ್ಲ ಎಂದು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಶರತ್‌ ಡಿ. ಅವರು ಪವರ್‌ ಪ್ರಜೆಂಟೇಷನ್‌ ಮೂಲಕ ಪ್ರವಾಹ, ಅದನ್ನು ನಿರ್ವಹಿಸಿದ ಬಗೆ ಹಾಗೂ ಪರಿಹಾರ ವಿತರಣೆ ಕ್ರಮಗಳ ಬಗ್ಗೆ ವಿವರಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT